ರಾಜ್ಯದ 12 ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ನಾಳೆ ನಡೆಯಲಿರುವ ಮತದಾನಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹಲವಾರು ಅಮಿಷಗಳನ್ನು ಒಡ್ಡುತ್ತಿದ್ದಾರೆ.
12 ಜಿಲ್ಲೆಗಳಲ್ಲಿ ಬಹಿರಂಗ ಪ್ರಚಾರ ನಿನ್ನೆ ಅಂತ್ಯಗೊಂಡಿದ್ದು, ಚುನಾವಣೆಯಲ್ಲಿ ಜಯಗಳಿಸಲು ಅಭ್ಯರ್ಥಿಗಳು ಶತಾಯ ಗತಾಯ ಪ್ರಯತ್ನ ನಡೆಸಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಳ ತಂತ್ರಗಳಿಗೆ ಶರಣಾಗಿವೆ ಎಂದು ಮೂಲಗಳು ತಿಳಿಸಿವೆ.
ಮೊದಲ ಹಂತದ ಚುನಾವಣೆಗೆ 13,652 ಸಿವಿಲ್ ಪೊಲೀಸರು, 11,540 ಗೃಹ ರಕ್ಷಕ ದಳ ಮತ್ತು 150ಕ್ಕೂ ಹೆಚಚ್ಿನ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ಅದಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ 12 ಜಿಲ್ಲೆಗಳಲ್ಲಿ 375 ಜಿಲ್ಲಾ ಪಂಚಾಯಿತಿ ಹಾಗೂ 1728 ತಾಲ್ಲೂಕು ಪಂಚಾಯಿತಿ ಸ್ಥಾನಗಳಿಗೆ ಮತದಾನ ನಡೆಯಲಿವೆ. ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ 1549 ಅಭ್ಯರ್ಥಿಗಳು, ತಾಲ್ಲೂಕು ಪಂಚಾಯಿತಿಯಲ್ಲಿ 6144 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು ಬೀದರ್, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ನಡೆಯಲಿದೆ.
ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಮತದಾನ ನಾಳೆ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.