ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜಿ.ಪಂ.: ಗೊಂದಲ-ಗಲಾಟೆ ಮಧ್ಯೆ ಮತದಾನ ಶಾಂತಿಯುತ (ZP-TP polls | Congress | JDS | BJP)
Bookmark and Share Feedback Print
 
ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷಗಳ ಪ್ರತಿಷ್ಠೆಯ ಕಣವಾಗಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳ ಮೊದಲ ಹಂತದ ಮತದಾನ ಭಾನುವಾರ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಮತದಾನದ ಆರಂಭ ಮಂದಗತಿಯಲ್ಲಿದ್ದರೂ, ಅಪರಾಹ್ನದ ಹೊತ್ತಿಗೆ ಚುರುಕು ಪಡೆದುಕೊಂಡಿತ್ತು.

ಮತಯಂತ್ರ ಧ್ವಂಸ, ಕಾರ್ಯಕರ್ತರ ಗದ್ದಲ, ಹಣ ಹಂಚಿಕೆ ಸೇರಿದಂತೆ ಕೆಲವು ಕಡೆ ಸಣ್ಣ-ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಒಟ್ಟಾರೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿತ್ತು.

ರಾಜ್ಯದ 12 ಜಿಲ್ಲೆಗಳಾದ ಬಳ್ಳಾರಿ, ಚಿಕ್ಕಬಳ್ಳಾಪುರ, ರಾಯಚೂರು, ಬೆಂಗಳೂರು ನಗರ (ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ), ಬೆಂಗಳೂರು ಗ್ರಾಮಾಂತರ, ಬೀದರ್, ಶಿವಮೊಗ್ಗ, ತುಮಕೂರು, ರಾಮನಗರ, ಚಿತ್ರದುರ್ಗ, ಕೋಲಾರ, ಮತ್ತು ಯಾದಗಿರಿಗಳಲ್ಲಿ ಚುನಾವಣೆ ನಡೆದಿದೆ.

ಬೆಳಿಗ್ಗೆ ಹೊತ್ತು ಚಳಿಯಿಂದಾಗಿ ಹೆಚ್ಚಿನ ಮತಗಟ್ಟೆಗಳಲ್ಲಿ ಮತದಾರರು ಸುಳಿದಿರಲಿಲ್ಲ. ಆದರೆ ಸೂರ್ಯ ನೆತ್ತಿಗೆ ಬರುತ್ತಿದ್ದಂತೆ ಜನ ಮತ ಚಲಾಯಿಸಲು ಮುಂದಾಗಿದ್ದರು. ಅಂದಾಜುಗಳ ಪ್ರಕಾರ ಸಂಜೆ ಹೊತ್ತಿಗೆ ಒಟ್ಟಾರೆ ಶೇ.45ರಷ್ಟು ಮತದಾನವಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಇನ್ನಷ್ಟೇ ಬರಬೇಕಿದೆ.

12 ಜಿಲ್ಲೆಗಳ 374 ಜಿಲ್ಲಾ ಪಂಚಾಯತ್ ಸ್ಥಾನಗಳಿಗಾಗಿ ಚುನಾವಣೆಗೆ ನಿಂತಿರುವ ಒಟ್ಟು ಅಭ್ಯರ್ಥಿಗಳು 1,549. ಈ ಜಿಲ್ಲೆಗಳಲ್ಲಿರುವ ತಾಲೂಕು ಪಂಚಾಯತ್ ಸ್ಥಾನಗಳು 1,335. ಇಲ್ಲಿ 4,762 ಮಂದಿಯ ಅದೃಷ್ಟವನ್ನು ಮತದಾರ ಮತಯಂತ್ರದಲ್ಲಿ ಭದ್ರಪಡಿಸಿದ್ದಾನೆ.

ಅಟೋ ವ್ಯವಸ್ಥೆಗೆ ಆಕ್ಷೇಪ...
ಮತದಾರರನ್ನು ತಮ್ಮತ್ತ ಸೆಳೆಯಲು ಅಭ್ಯರ್ಥಿಗಳು ಮತ್ತು ಸಂಬಂಧಪಟ್ಟ ರಾಜಕೀಯ ಪಕ್ಷಗಳು ಇಲ್ಲದ ಕಸರತ್ತುಗಳನ್ನು ನಡೆಸುವುದು ಹೊಸತಲ್ಲ. ಈ ಬಾರಿಯೂ ಹಲವು ಕಡೆ ಇಂತಹ ಆಮಿಷ ಮತ್ತು ಸಹಾಯಗಳು ಬೆಳಕಿಗೆ ಬಂದಿವೆ.

ಶಹಾಪುರ ತಾಲೂಕಿನ ನಾಯ್ಕಲ್ ಮತಗಟ್ಟೆಯಲ್ಲಿ ಟಂಟಂ ಮತ್ತು ಅಟೋ ವ್ಯವಸ್ಥೆಗಳನ್ನು ಮತದಾರರಿಗೆ ಮಾಡಲಾಗಿದೆ. ಕೆಲವು ಅಭ್ಯರ್ಥಿಗಳ ಪರವಾಗಿ ಮತದಾರರನ್ನು ಕರೆದುಕೊಂಡು ಬರಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಇಲ್ಲಿನ ಚುನಾವಣಾಧಿಕಾರಿ ಶಂಕರ್ ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಮತಯಂತ್ರ ದೋಷ...
ಇದೇ ಮೊದಲ ಬಾರಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ ಬಳಸಲಾಗುತ್ತಿದ್ದು, ಹಲವು ಕಡೆ ಮತಯಂತ್ರಗಳಲ್ಲಿ ದೋಷಗಳು ಕಂಡು ಬಂದಿವೆ.

ಸುಮಾರು 1.25 ಕೋಟಿ ಮತದಾರರು ಇರುವ ಇಂದಿನ ಚುನಾವಣಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಯಂತ್ರವನ್ನೇ ಬಳಸಲಾಗುತ್ತಿದೆ. ದೋಷ ಕಂಡು ಬಂದ ಕೆಲವು ಕಡೆ ವಿಳಂಬವಾಗಿ ಮತದಾನ ಆರಂಭಿಸಲಾಯಿತು. ಇನ್ನು ಕೆಲವು ಕಡೆ ಮತದಾನವನ್ನು ಮುಂದಕ್ಕೆ ಹಾಕಲಾಗಿದೆ ಎಂದು ವರದಿಗಳು ಹೇಳಿವೆ.

ಕಾಂಗ್ರೆಸ್ಸಿಗರಿಂದ ಮತಯಂತ್ರ ಧ್ವಂಸ..
ಇಂತಹ ದುಷ್ಕೃತ್ಯಕ್ಕೆ ಮುಂದಾಗಿರುವುದು ಕಾಂಗ್ರೆಸ್ ಕಾರ್ಯಕರ್ತರು. ಬಿಜೆಪಿ ಕಾರ್ಯಕರ್ತರು ಮತದಾನಕ್ಕೆ ಅವಕಾಶ ನೀಡುತ್ತಿಲ್ಲ, ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಿ ಎರಡು ಕಡೆ ಮತಯಂತ್ರಗಳನ್ನು ಧ್ವಂಸಗೊಳಿಸಲಾಗಿದೆ.

ಹೊಸಕೋಟೆ ತಾಲೂಕಿನ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿನ ಆಲಗೊಂಡನ ಹಳ್ಳಿ ಮತ್ತು ದೊಡ್ಡದೇನಹಳ್ಳಿಯಲ್ಲಿ ಎರಡು ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತದಾನ ಯಂತ್ರಗಳನ್ನು ನೆಲಕ್ಕೆ ಅಪ್ಪಳಿಸಿ ನಾಶಪಡಿಸಲಾಗಿದೆ.

ಈ ಸಂಬಂಧ ನರೇಶ್ ಮತ್ತು ಪ್ರಕಾಶ್ ಎಂಬ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ಹೊಸಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮತದಾನ ಬಹಿಷ್ಕಾರ...
ರಸ್ತೆ, ನೀರು, ಸೇತುವೆ ಮುಂತಾದ ಮೂಲಭೂತ ವ್ಯವಸ್ಥೆಗಳನ್ನು ನಿರ್ಮಿಸದ ಆಡಳಿತಶಾಹಿ ವಿರುದ್ಧ ಹಲವು ಕಡೆ ಪ್ರತಿಭಟನೆಗಳು ವ್ಯಕ್ತವಾಗಿವೆ. ಕೆಲವು ಕಡೆ ಮತದಾನವನ್ನೇ ಬಹಿಷ್ಕರಿಸಲಾಗಿದೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಗ್ರಾಮದ ತುಂಬಿನಕೆರೆ ಕ್ಷೇತ್ರದಲ್ಲಿ ಮತಗಟ್ಟೆ ಸ್ಥಾಪಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಮತದಾನಕ್ಕೆ ಬಹಿಷ್ಕಾರ ಹಾಕಿರುವ ವರದಿಗಳು ಬಂದಿವೆ.

ಹಣ ಹಂಚಿದ ಜೆಡಿಎಸ್....
ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮತದಾರರ ಓಲೈಕೆಯಲ್ಲಿ ತೊಡಗಿದ್ದ ರಾಜಕೀಯ ಪಕ್ಷಗಳು ಚುನಾವಣೆಯ ದಿನದಂತೂ ವಿಶ್ರಾಂತಿ ಅನುಭವಿಸಿಲ್ಲ. ಕೊನೆಯ ಹಂತದಲ್ಲಿ ಮನ ಒಲಿಸಲು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿವೆ.

ಕೋಲಾರದ ನರಸಾಪುರದಲ್ಲಿ ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ಮತದಾರರಿಗೆ ಹಣ ಹಂಚಿದ್ದಾರೆ. ಒಂದು ಮತಕ್ಕೆ 100ರಿಂದ 500 ರೂಪಾಯಿಗಳವರೆಗೆ ಹಂಚಲಾಗಿದೆ ಎಂದು ಆರೋಪಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ