ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಸರಕಾರದ ಭ್ರಷ್ಟಾಚಾರದ ಕಥೆ ನನ್ನಲ್ಲಿದೆ: ಗೌಡ (HD Deve Gowda | JDS | BJP | BS Yeddyurappa)
Bookmark and Share Feedback Print
 
ಕರ್ನಾಟಕದ ಬಿಜೆಪಿ ಸರಕಾರವು ನಡೆಸಿರುವ ಭ್ರಷ್ಟಾಚಾರದ ಪೂರ್ಣ ಕಥೆ ನನ್ನಲ್ಲಿದೆ. ಇದೇನೂ ನಾನು ದೂರವಾಣಿ ಕದ್ದಾಲಿಕೆ ಮಾಡಿ ಸಂಗ್ರಹಿಸಿದ ಮಾಹಿತಿ ಅಥವಾ ದಾಖಲೆಗಳಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರಕಾರ ಮಾಡಿರುವ ಅಕ್ರಮಗಳು ಒಂದು ಲಕ್ಷ ಕೋಟಿ ರೂಪಾಯಿಯನ್ನೂ ಮೀರಿಸಿದ್ದು, ಸಿಬಿಐ ಅಥವಾ ಇನ್ನಿತರ ಕೇಂದ್ರ ಸಂಸ್ಥೆಗಳು ತನಿಖೆ ನಡೆಸಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಒತ್ತಾಯಿಸಿದರು.

ಕರ್ನಾಟಕದಲ್ಲಿ ನಡೆದಿರುವ ಹಗರಣಗಳು ಒಂದೆರಡಲ್ಲ. ಅದು ಕೇಂದ್ರದ 2ಜಿ ತರಂಗಾಂತರ ಹಂಚಿಕೆ ಹಗರಣವನ್ನೂ ನಾಚಿಸುವಂತದ್ದು. ಈ ಸರಕಾರ ಬಂದ ಮೇಲೆ ನಡೆದಿರುವ ಎಲ್ಲಾ ಭ್ರಷ್ಟಾಚಾರಗಳ ದಾಖಲೆಗಳು ನನ್ನಲ್ಲಿವೆ. ಇವುಗಳನ್ನು ತನಿಖಾ ಸಂಸ್ಥೆಗಳಿಗೆ ನೀಡಲು ನಾನು ಸಿದ್ಧನಿದ್ದೇನೆ ಎಂದು ಗೌಡರು ನುಡಿದರು.

ಈ ದಾಖಲೆಗಳನ್ನು ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಸರಕಾರದ ಪ್ರಮುಖರಿಗೆ ಹಾಗೂ ಬಿಜೆಪಿ ನಾಯಕರಿಗೂ ಕಳುಹಿಸಿಕೊಡುವುದಾಗಿ ತಿಳಿಸಿದರು.

'2ಜಿ ಸ್ಪೆಕ್ಟ್ರಂ ಹಗರಣವನ್ನೂ ಮೀರಿಸಿದ ಕರ್ನಾಟಕದ ಭೂಮಿ ಮತ್ತು ಗಣಿ ಹಗರಣಗಳು.., ಮಹಾ ಭ್ರಷ್ಟಾಚಾರದ ವಿರುದ್ಧ ಮಹಾಭಾರತ ಯುದ್ಧ' ಎಂಬ ಸುದೀರ್ಘ ಶೀರ್ಷಿಕೆಯ ಆರೋಪ ಪಟ್ಟಿಯನ್ನು ದೇವೇಗೌಡ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಭಾರೀ ವಿವಾದಕ್ಕೆ ಕಾರಣವಾಗಿರುವ ಬಿಎಂಐಸಿ ಯೋಜನೆ ಅವ್ಯವಹಾರ, ಗಣಿಗಾರಿಕೆ ಅಕ್ರಮಗಳು, ಭೂಮಿ-ನಿವೇಶನ ಹಂಚಿಕೆಯಲ್ಲಿನ ಸ್ವಜನ ಪಕ್ಷಪಾತ ಮತ್ತು ಡಿನೋಟಿಫಿಕೇಶನ್ ಅಕ್ರಮಗಳು ಮುಂತಾದ ಹಗರಣಗಳ ಕುರಿತು ಸಿಬಿಐ ಅಥವಾ ಜಾರಿ ನಿರ್ದೇಶನಾಲಯ ತನಿಖೆ ನಡೆಸಬೇಕು. ಈ ಸಂಬಂಧ ಕೇಂದ್ರ ಸರಕಾರವೇ ಮುಂದಾಗಿ ಆದೇಶ ಹೊರಡಿಸಬೇಕು ಎಂದೂ ಅವರು ಒತ್ತಾಯಿಸಿದರು.

ಯಾರು ಸುಮ್ಮನೆ ಕೂತರೂ, ನಾನು ಬಿಡಲಾರೆ ಎಂದಿರುವ ಮಾಜಿ ಪ್ರಧಾನಿ, ಮುಂಬರುವ ಸಂಸತ್ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ರಾಜ್ಯದ ಭ್ರಷ್ಟಾಚಾರವನ್ನು ಪ್ರಸ್ತಾಪಿಸುತ್ತೇನೆ. ಈ ಸಂಬಂಧ ನನ್ನಲ್ಲಿರುವ ಎಲ್ಲಾ ದಾಖಲೆಗಳನ್ನು ಸಂಸತ್ತಿನ ಮುಂದಿಟ್ಟು ಚರ್ಚೆ ನಡೆಸುತ್ತೇನೆ. ನನ್ನ ಈ ಪ್ರಯತ್ನಕ್ಕೆ ಬಿಜೆಪಿ ಅಡ್ಡಿಪಡಿಸಿದರೆ, ಸಂಸತ್ತಿನಲ್ಲಿ ಧರಣಿ ನಡೆಸುತ್ತೇನೆ ಎಂದು ಪ್ರಕಟಿಸಿದರು.

ಈ ಸರಕಾರವನ್ನು ಕೇಳುವವರೇ ಇಲ್ಲದಂತಾಗಿದೆ. ಅವರು ಮಾಡಿರುವ ಅವ್ಯವಹಾರಗಳು, ಅಕ್ರಮಗಳು ಒಂದೆರಡಲ್ಲ. ಏನೇನೋ ಮಾಡಿ ಅಧಿಕಾರಕ್ಕೆ ಬಂದವರು ಹಲವು ಶಾಸಕರನ್ನು ಅನರ್ಹಗೊಳಿಸಿದರು. ಈಗ ವಿಧಾನಸಭೆಯಲ್ಲಿ ಗದ್ದಲ ಮಾಡಿದರು ಎಂಬ ಕಾರಣಕ್ಕೆ 15 ಶಾಸಕರನ್ನು ಹೊರಗೆ ಹಾಕಲು ಚಿಂತನೆ ನಡೆಸುತ್ತಿದೆ. ಮಾಡಲಿ, ಆ ಮೇಲೆ ತಮಗೆ ಬೇಕಾದಂತೆ ಅವರಿಗೆ ಆಡಳಿತ ನಡೆಸಬಹುದು ಎಂದು ಗೌಡರು ಲೇವಡಿ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ