ಬಿಜೆಪಿಯ ಸಿದ್ಧಾಂತಗಳನ್ನು ಗಾಳಿಗೆ ತೂರಿ ಪ್ರತಿಪಕ್ಷಗಳ ಆಮಿಷಗಳಿಗೆ ಬಲಿಯಾಗಿ ಎಲ್ಲೆಲ್ಲೋ ಸೇರಿಕೊಂಡಿರುವವರನ್ನು ಸುಮ್ಮನೆ ಬಿಡುವುದಿಲ್ಲ. ಪಕ್ಷ ಬಿಟ್ಟವರಿಗೆ ಸರಿಯಾಗಿ ಪಾಠ ಕಲಿಸುತ್ತೇನೆ. ಅವರಿಗೆ ಠೇವಣಿ ಸಿಗದಂತೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.
ವಿಜಾಪುರದ ಇಂಡಿಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಬಿಜೆಪಿ ಬಿಟ್ಟು ಹೊರಗೆ ಹೋದವರು ಪಂಚಾಯತ್ ಚುನಾವಣೆಗಲಲ್ಲಿ ಠೇವಮಿ ಉಳಿಸಿಕೊಳ್ಳುವುದನ್ನು ನಾನೂ ನೋಡುತ್ತೇನೆ ಎಂದು ಸವಾಲು ಹಾಕಿದರು.
ಬಿಜೆಪಿ ಮತ್ತು ಪಕ್ಷೇತರ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಅವರ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಲು ಅವಕಾಶ ನೀಡಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದ ಯಡಿಯೂರಪ್ಪ, ಅವರು ಅಧಿಕಾರದ ಆಸೆಗಾಗಿ ಪಕ್ಷವನ್ನು ಬಿಟ್ಟವರು. ಅವರನ್ನು ರಾಜಕೀಯವಾಗಿ ಮುಗಿಸದೆ ಬಿಡೆ ಎಂದರು.
ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಗೆ ಬರಲಿ. ಬಿಜೆಪಿಯ ಶಕ್ತಿ ಏನೆಂಬುದನ್ನು ನಾನು ತೋರಿಸುತ್ತೇನೆ. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಿಗಿಂತ ಹೆಚ್ಚು ಸ್ಥಾನಗಳು ನಮಗೆ ಲಭಿಸುವ ಕುರಿತು ಯಾವುದೇ ಸಂಶಯಗಳಿಲ್ಲ. 20ಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಬಿಜೆಪಿ ಅಧಿಕಾರ ಪಡೆಯಲಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಹಗರಣಗಳಲ್ಲಿ ಮುಳುಗಿದ್ದರೂ ಆ ಪಕ್ಷದ ನಾಯಕರು ಕರ್ನಾಟಕದ ಬಿಜೆಪಿ ಸರಕಾರದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅದರ ಸೃಷ್ಟಿಯೇ ಭೂ ಹಗಹಣ. ಇಂತಹುದ್ದಕ್ಕೆಲ್ಲ ನಾನು ಹೆದರುವುದಿಲ್ಲ. ನೀವು ದಾಖಲೆಗಳನ್ನು ತೋರಿಸಿ ಆರೋಪಗಳನ್ನು ಮಾಡಿ. ಚುನಾಯಿತ ಸರಕಾರವನ್ನು ಅಸ್ಥಿರಗೊಳಿಸುವ ಸಂಚನ್ನು ಕೈ ಬಿಡಿ ಎಂದು ಪ್ರತಿಪಕ್ಷಗಳಿಗೆ ಸಲಹೆ ನೀಡಿದರು.
ವಿಧಾನಸಭೆ ಅಧಿವೇಶನದಲ್ಲಿ ಹಗರಣಗಳ ಕುರಿತು ಚರ್ಚಿಸಲು ನಾನು ಸಿದ್ಧ ಎಂದು ಘೋಷಿಸಿದ ಮುಖ್ಯಮಂತ್ರಿ, ನಿಮ್ಮ ಹಗರಣಗಳ ಹೂರಣವನ್ನೂ ನಾನು ಬಯಲಿಗೆಳೆಯುತ್ತೇನೆ. ಕರ್ನಾಟಕದ ಜನತೆಗೆ ನಿಜ ಸಂಗತಿ ಏನೆಂಬುದು ತಿಳಿಯಲಿ. ಅವರೇ ಯಾರು ಸಾಚಾಗಳು ಎಂಬುದನ್ನು ತೀರ್ಮಾನಿಸಲಿ. ಇದನ್ನೇ ಪ್ರತಿಪಕ್ಷಗಳಿಗೂ ಹೇಳಿದ್ದೇನೆ. ಆದರೆ ಅವರು ಮಾತ್ರ ಬೀದಿಯಲ್ಲೇ ಚರ್ಚೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.