ಚಿತ್ರನಟ ಕಿಚ್ಚ ಸುದೀಪ್ ಕಾಂಗ್ರೆಸ್ ಸೇರಿಕೊಂಡರೇ? ಗೊತ್ತಿಲ್ಲ, ಆದರೆ ಸ್ವತಃ ಸುದೀಪ್ ಭಾನುವಾರ ಹಲವು ಕಡೆ ಕಾಂಗ್ರೆಸ್ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇದರೊಂದಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳಿಗೆ ಮತ್ತಷ್ಟು ಪುಷ್ಠಿ ಬಂದಿದೆ.
MOKSHA
ಸುದೀಪ್ ಪ್ರಚಾರಕ್ಕೆ ತೆರಳಿರುವುದು ಮಂಡ್ಯದ ಗಂಡು ಅಂಬರೀಷ್ ಅವರ ಒತ್ತಾಯಕ್ಕೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಅಂಬರೀಷ್ ಅವರ ಕೈ ಬಲಪಡಿಸಬೇಕು ಎಂದು ಮಂಡ್ಯದ ಹಲವೆಡೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅಭ್ಯರ್ಥಿಗಳ ಪರ ಮತ ಯಾಚಿಸಿದ ಸುದೀಪ್ ಕೇಳಿಕೊಂಡಿದ್ದಾರೆ.
ಭಾನುವಾರ ಮಂಡ್ಯದ ತಗ್ಗಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದರು.
ಬೇಲೂರು, ಮಂಗಲ, ಸೂನಗಹಳ್ಳಿ, ಸಂತೆಕಸಲಗೆರೆ ಮುಂತಾದೆಡೆ ರೋಡ್ ಶೋ ನಡೆಸಿದ ಸುದೀಪ್‌ಗೆ ಕಾಂಗ್ರೆಸ್ ಅಭ್ಯರ್ಥಿಗಳಾದ ಜಯಕಾಂತ, ಅನ್ನಪೂರ್ಣ, ಸುನೀತಾ ರಮೇಶ್ ಮುಂತಾದವರು ಸಾಥ್ ನೀಡಿದರು.
ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆ? ಕೆಲ ಸಮಯದ ಹಿಂದಷ್ಟೇ ಸುದೀಪ್ ತಾನು ನಟನೆಯನ್ನು ತೊರೆಯುತ್ತಿರುವುದಾಗಿ ಹೇಳಿಕೊಂಡಿದ್ದರು. ಅದಕ್ಕೂ ಮೊದಲು ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು.
ಇವೆರನ್ನೂ ತಾಳೆ ಹಾಕಿದಾಗ, ಅವರು ಹೇಳಿರುವುದು ಮತ್ತು ಎದ್ದಿದ್ದ ಸುದ್ದಿಗಳಿಗೆ ಹೋಲಿಕೆಯಾಗುತ್ತಿರುವುದು ಕಂಡು ಬರುತ್ತಿದೆ. ಬಹುಶಃ ರಾಜಕಾರಣದಲ್ಲಿ ಸುದೀಪ್ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ. ಅದೇ ಕಾರಣದಿಂದ ತಾನು ಚಿತ್ರರಂಗ ತೊರೆಯುತ್ತಿರುವುದಾಗಿ ಅವರು ಹೇಳಿರಬಹುದು ಎಂದು ಹೇಳಲಾಗುತ್ತಿದೆ.
ಸುದೀಪ್ ಅವರನ್ನು ಸೆಳೆಯಲು ಬಿಜೆಪಿ ಮತ್ತು ಜೆಡಿಎಸ್‌ಗಳು ಕೂಡ ತುದಿಗಾಲಿನಲ್ಲಿ ನಿಂತಿವೆ. ಸ್ವತಃ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈ ಬಗ್ಗೆ ಹೆಚ್ಚು ಆಸಕ್ತರಾಗಿದ್ದಾರೆ. ಸುದೀಪ್ ಜೆಡಿಎಸ್‌ಗೆ ಬಂದರೆ, ಬಳ್ಳಾರಿ ಗಣಿಧಣಿಗಳ ವಿರುದ್ಧ ಕಣಕ್ಕಿಳಿಸಲು ಗೌಡರು ಈ ಹಿಂದೆಯೇ ಯೋಚಿಸಿದ್ದರು.
ಈ ಪಟ್ಟಿಯಲ್ಲಿ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ಯುವ ರಕ್ತ ಬಯಸುತ್ತಿರುವ ಬಿಜೆಪಿ, ಆ ನಿಟ್ಟಿನಲ್ಲಿ ಸುದೀಪ್ ಬಂದರೆ ಲಾಭವಾಗಬಹುದು ಎಂದು ಲೆಕ್ಕಚಾರ ಹಾಕಿಕೊಂಡಿದೆ.
ಆದರೆ ಇವೆಲ್ಲ ಲೆಕ್ಕಾಚಾರಗಳನ್ನೂ ಮೀರಿ ಸುದೀಪ್ ಕಾಂಗ್ರೆಸ್‌ಗೆ ಸೇರಲಿದ್ದಾರೆ ಎನ್ನುವುದು ಇತ್ತೀಚಿನ ಬೆಳವಣಿಗೆ. ಅಂಬರೀಷ್ ಅವರಂತಹ ಘಟಾನುಘಟಿಗಳು ಬೆನ್ನಿಗಿರುವುದರಿಂದ ಸುದೀಪ್ ಕೂಡ ಕಾಂಗ್ರೆಸ್ ಪಕ್ಷವನ್ನೇ ನೆಚ್ಚಿಕೊಳ್ಳುವ ಸಾಧ್ಯತೆಗಳು ಹೆಚ್ಚು.
ಚಿತ್ರನಟರು ಯಾವುದೇ ಪಕ್ಷದ ಪರ ಪ್ರಚಾರ ನಡೆಸುವುದು ಸಾಮಾನ್ಯ. ಬಾಲಿವುಡ್ ನಟರೆಲ್ಲ ಬೆಳಿಗ್ಗೆ ಒಂದು ಪಕ್ಷದ ಅಭ್ಯರ್ಥಿಯ ಪರ, ಮಧ್ಯಾಹ್ನ ಇನ್ನೊಂದು ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡುತ್ತಾರೆ. ಸುದೀಪ್ ಆ ಕ್ಯಾಟಗರಿಗೆ ಸೇರಿದವರಲ್ಲ. ಆದರೂ ಈ ಬಗ್ಗೆ ಸುದೀಪ್ ಯಾವುದೇ ಪ್ರತಿಕ್ರಿಯೆ ನೀಡಲು ಹೋಗಿಲ್ಲ.
ಅಭಿಮಾನಿಗಳಂತೂ ಅವರು ಯಾವ ಪಕ್ಷ ಸೇರುತ್ತಾರೆ ಎಂಬ ಕುತೂಹಲದಿಂದಿದ್ದಾರೆ.