ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಮಾಡ್ತೀವಂದ್ರೆ ಸಿದ್ದು ಬಿಜೆಪಿಗೆ ಬರ್ತಾರೆ: ಈಶ್ವರಪ್ಪ (KS Eshwarappa | Sidharamaih | BJP | Congress)
Bookmark and Share Feedback Print
 
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಅಧಿಕಾರದ ಆಸೆ. ಅದಕ್ಕಾಗಿ ಏನು ಮಾಡಲೂ ಅವರು ಹಿಂದೆ ಮುಂದೆ ನೋಡುವವರಲ್ಲ. ಅವರನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿದರೆ ನಾಳೆ ಬಿಜೆಪಿ ಸೇರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದರು.

ಮೈಸೂರಿನಲ್ಲಿ ಸೋಮವಾರ ಬೆಳಿಗ್ಗೆ ಪತ್ರಕರ್ತರ ಜತೆ ಮಾತನಾಡುತ್ತಾ, ಸಿದ್ದರಾಮಯ್ಯ ಅಹಿಂದ ಚಳವಳಿಯನ್ನು ತನ್ನ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಂಡರು ಎಂದು ಆರೋಪಿಸಿದರು.

ಸಿದ್ದರಾಮಯ್ಯಗೆ ಅಧಿಕಾರವೇ ಮುಖ್ಯ. ಅದೇ ಕಾರಣಕ್ಕಾಗಿ ಪಕ್ಷಾಂತರ ಮಾಡುತ್ತಾರೆ. ಅವರ ಮುಂದಿರುವುದು ಈಗ ಮುಖ್ಯಮಂತ್ರಿ ಪಟ್ಟ. ಅದಕ್ಕಾಗಿ ಏನನ್ನೂ ಮಾಡಲು ಸಿದ್ಧರಿದ್ದಾರೆ. ಅದೇ ಕಾರಣದಿಂದ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿಕೊಂಡರು ಎಂದು ನುಡಿದರು.

ಕಾಂಗ್ರೆಸ್‌ಗೆ ಬಂದ ಮೇಲೆ ಒಂದು ಹಂತದಲ್ಲಿ ಮೂಲೆಗುಂಪಾದ ಸಿದ್ದರಾಮಯ್ಯರಿಗೆ ಆಗ ನೆನಪಾದದ್ದು ಅಹಿಂದ. ಏನಾದರೂ ಮಾಡಿ ಅಧಿಕಾರ ಬೇಕು ಎನ್ನುವುದೇ ಅವರ ಗುರಿ. ಯಾವತ್ತೂ ನೋಡಿದರೂ ಸಿಎಂ ಕುರ್ಚಿಯ ಕನಸು ಕಾಣುತ್ತಾರೆ. ಆ ಕನಸು ಬಿದ್ದರೆ ಬಿಜೆಪಿ ಸೇರಲೂ ಅವರು ಸಿದ್ಧರಿದ್ದಾರೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

ಉಭಯ ಸದನಗಳ ಪ್ರತಿಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಮತ್ತು ಮೋಟಮ್ಮ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಟೀಕಿಸಿದ ಅವರು, ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ವಿಪಕ್ಷದ ನಾಯಕರಾಗುತ್ತಿದ್ದಾರೆ; ಅವರಿಗೆ ಮತ್ತೆ ಕೇಂದ್ರದಲ್ಲಿ ಸಚಿವರಾಗುವ ಆಸೆ. ಸೋನಿಯಾ ಗಾಂಧಿಯನ್ನು ಓಲೈಸಲು ವೃಥಾ ಸರಕಾರವನ್ನು ಎಳೆದಾಡುತ್ತಾರೆ ಎಂದರು.

ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದು ಯಡಿಯೂರಪ್ಪ ಪಾಳಯದಿಂದ ಹಣ ತೆಗೆದುಕೊಂಡು ಹೋಗಲು ಎಂದು ಪ್ರತಿಪಕ್ಷಗಳು ಆರೋಪಿಸಿರುವುದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಗಡ್ಕರಿಗೆ ನಮ್ಮಿಂದ ಹಣ ಪಡೆಯುವ ಅಗತ್ಯವಿಲ್ಲ. ಅವರ ತಿಂಗಳ ಆದಾಯ ಏಳು ಕೋಟಿಯನ್ನೂ ಮೀರುತ್ತದೆ. ಈ ಬಗ್ಗೆ ಕಾಂಗ್ರೆಸ್ಸಿಗರಿಗೆ ಜ್ಞಾನವಿಲ್ಲ ಎಂದು ಅಸಹನೆ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ