ರಾಜ್ಯ ಸರಕಾರದ ವಿರುದ್ಧ ಅನಗತ್ಯ ಆರೋಪ ಮಾಡುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೌರವರ ಗುಂಪಿನಲ್ಲಿದ್ದಾರೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಜಿಪಂ, ತಾಪಂ ಚುನಾವಣೆ ಪ್ರಚಾರಕ್ಕೆಂದು ಜಿಲ್ಲೆಗಾಗಮಿಸಿದ್ದ ಅವರು ದೇವೇಗೌಡರು 'ಮಹಾಭ್ರಷ್ಟಾಚಾರದ ವಿರುದ್ಧ ಮಹಾಭಾರತ' ಪುಸ್ತಕ ಬಿಡುಗಡೆ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿ, ರಾಜಕೀಯ ವ್ಯವಸ್ಥೆ ಹಾಳು ಮಾಡಿದವರೇ ಕಾಂಗ್ರೆಸ್, ಜೆಡಿಎಸ್ನವರು. ಡಿನೋಟಿಫಿಕೇಶನ್ ದೇವೇಗೌಡರ ಕಾಲದಿಂದಲೂ ನಡೆದುಕೊಂಡು ಬಂದ ದಂಧೆ. ಅವರ ಮಗ (ಕುಮಾರಸ್ವಾಮಿ) ಏನೇನು ಮಾಡಿದ್ದಾರೆಂಬುದನ್ನು ಜನತೆಗೆ ಮೊದಲು ತಿಳಿಸಲಿ ಎಂದರು.
ಮುಖ್ಯಮಂತ್ರಿಗಳ ವಿರುದ್ಧ ಆರೋಪ ಮಾಡುವ ದೇವೇಗೌಡರು ಭೂಹಗರಣ, ಅಕ್ರಮ ಗಣಿಗಾರಿಕೆ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ದೇವೇಗೌಡರದು ಬರೀ ಹಿಟ್ ಆಂಡ್ ರನ್ ಕೇಸ್ ಎಂದು ಕಿಡಿಕಾರಿದ ಶೋಭಾ, ದಾಖಲೆಗಳನ್ನು ನ್ಯಾಯಾಂಗ, ಲೋಕಾಯುಕ್ತರಿಗೆ ಕೊಡಲಿ. ನಮಗೆ ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಂಬಿಕೆ ಇದೆ. ಬೇಕಾದರೆ ವಿಧಾನಸಭೆಯಲ್ಲಿ ದಾಖಲೆ ಸಹಿತ ಚರ್ಚಿಸಲಿ ಎಂದು ಸವಾಲು ಹಾಕಿದರು.
ಸರದಾರ ವಲ್ಲಭಭಾಯಿ ಪಟೇಲ್ ನಂತರದ ದೇಶಕಂಡ ಅಪ್ರತಿಮ ನಾಯಕ ಎಲ್.ಕೆ.ಆಡ್ವಾಣಿ ಅಂಥ ಮಹಾನ್ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದು ದೇವೇಗೌಡರಿಗೆ ಶೋಭೆ ತರುವುದಿಲ್ಲ ಎಂದು ಶೋಭಾ ಅಸಮಾಧಾನ ವ್ಯಕ್ತಪಡಿಸಿದರು.