ರಾಜ್ಯ ಬಿಜೆಪಿ ಸರಕಾರದ ಸಾಧನೆ ಕಂಡು ಸಹಿಸಿಕೊಳ್ಳಲಾಗದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ವಿ.ಎಸ್. ಆಚಾರ್ಯ ಕಿಡಿಕಾರಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರೇ ತಿಂಗಳಲ್ಲಿ ಸರಕಾರ ಪತನವಾಗಲಿದೆ ಎಂಬ ಹತಾಶೆಯ ಹೇಳಿಕೆಯನ್ನು ಪರಮೇಶ್ವರ್ ನೀಡಿದ್ದಾರೆ. ಕಳೆದ 60 ವರ್ಷಗಳಲ್ಲಿ ಆಗದ ಸಾಧನೆ ಎರಡೂವರೆ ವರ್ಷದಲ್ಲಿ ಆಗಿರುವುದನ್ನು ಕಂಡು ಸಹಿಸಲಾಗದ ಕಾಂಗ್ರೆಸ್ ಮತ್ತು ಜೆಡಿಎಸ್ ಇದೀಗ ಇಲ್ಲಸಲ್ಲದ ಆರೋಪ ಮಾಡುತ್ತಿವೆ ಎಂದರು.
ಭಾಗ್ಯಲಕ್ಷ್ಮಿ ಯೋಜನೆಯಡಿ 1,400 ಕೋಟಿ ರೂಪಾಯಿ ಎಲ್ಐಸಿಯಲ್ಲಿ ಠೇವಣಿ ಇಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 358 ಕೋಟಿ ರೂ. ಮೀಸಲಿಡಲಾಗಿದೆ. ಹಾಲು ಉತ್ಪಾದಕರ ಪತ್ನಿ ಅಥವಾ ತಾಯಿಯ ಹೆಸರಿನಲ್ಲಿ ಪ್ರತಿ ಲೀಟರ್‌ಗೆ 2 ರೂ. ಜಮೆ ಮಾಡುವ ಯೋಜನೆಯಲ್ಲಿ ಈಗಾಗಲೇ 203 ಕೋಟಿ ರೂ. ಜಮೆ ಮಾಡಲಾಗಿದೆ. 8ನೇ ತರಗತಿಯಲ್ಲಿ ಕಲಿಯುವ ಎಲ್ಲ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲಾಗಿದೆ ಎಂದು ವಿವರಿಸಿದರು.
ಅದೇ ರೀತಿ ಕೃಷಿಕರಿಗೆ ದೇಶದಲ್ಲೇ ಪ್ರಥಮ ಬಾರಿಗೆ ಶೇ.3 ಬಡ್ಡಿ ದರದಲ್ಲಿ ಸಾಲ ನೀಡಲಾಗಿದ್ದು, ಮುಂದಿನ ವರ್ಷ ಶೇ.1 ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆಯಿದೆ. ಸುವರ್ಣ ಗ್ರಾಮೋದಯ ಯೋಜನೆಯಡಿಯಲ್ಲಿ ವರ್ಷಕ್ಕೆ ಒಂದು ಸಾವಿರ ಪಂಚಾಯಿತಿಗಳನ್ನು ಆಯ್ಕೆ ಮಾಡಿ, ತಲಾ 1 ಕೋಟಿ ರೂ.ನಂತೆ ಬಿಡುಗಡೆಗೊಳಿಸಲಾಗಿದೆ. ಈ ಯೋಜನೆಯನ್ವಯ ಮೂರು ಹಂತದ ಯೋಜನೆ ಜಾರಿಯಾಗಿದ್ದು, ಮುಂದಿನ ಎರಡು ವರ್ಷದಲ್ಲಿ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಈ ಯೋಜನೆ ಲಾಭ ದೊರಕಲಿದೆ ಎಂದರು.