ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಗ ಕುಮಾರಸ್ವಾಮಿ ನಾಯಕತ್ವದಲ್ಲಿ ಚೈತನ್ಯವಿದೆ: ಗೌಡ (HD Kumaraswamy | HD Devegowda | JDS | BJP)
Bookmark and Share Feedback Print
 
ನನ್ನ ಮಗ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯ ನಾಯಕತ್ವದಲ್ಲಿ ನವಚೈತನ್ಯವಿದೆ. ಇದೇ ಕಾರಣದಿಂದ ರಾಜ್ಯದಾದ್ಯಂತ ಇತರೆ ಪಕ್ಷಗಳ ನೂರಾರು ಮಂದಿ ಜೆಡಿಎಸ್ ಸೇರುತ್ತಿದ್ದಾರೆ ಎಂದು ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಸನದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, ಈ ಚುನಾವಣೆ ನಂತರ ರಾಜ್ಯದ ರಾಜಕೀಯ ಬದಲಾವಣೆಯಾಗುವುದು ಖಚಿತ. ಅದರಲ್ಲಿ ಎರಡು ಮಾತಿಲ್ಲ. ಜೆಡಿಎಸ್ ಪ್ರಬಲವಾಗಿ ಹೊರ ಹೊಮ್ಮಲಿದೆ ಎಂದರು.

ವಿವಿಧ ಪಕ್ಷಗಳ ನಾಯಕರು, ಕಾರ್ಯಕರ್ತರು ಜೆಡಿಎಸ್ ಸೇರುತ್ತಿರುವುದು ದಿನೇದಿನೇ ಹೆಚ್ಚಾಗುತ್ತಿದೆ. ಎಲ್ಲಿ ನೋಡಿದರೂ ಜೆಡಿಎಸ್ ಅಲೆಯೇ ಕಾಣುತ್ತಿದೆ. ಇದನ್ನು ರಾಜಕೀಯ ಧ್ರುವೀಕರಣ ಎನ್ನುತ್ತೀರೋ ಅಥವಾ ರಾಜ್ಯ ಬಿಜೆಪಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ದುರಾಡಳಿತ ಎಂದು ಕರೆಯುತ್ತೀರೋ, ಜನತೆ ಆಡಳಿತದ ಬಗ್ಗೆ ಬೇಸತ್ತಿರುವುದಂತೂ ಹೌದು ಎಂದು ಗೌಡರು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಪುನರುಚ್ಛರಿಸಿದ ಅವರು, ಜನತಾ ಪರಿವಾರದ ನಾಯಕರು ಒಂದೇ ಸೂರಿಗೆ ಮರಳುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದರು. ಈ ಬಗ್ಗೆ ಈಗಲೇ ನಾನು ಏನನ್ನೂ ಹೇಳಲಾರೆ. ಆದರೆ ಕಾಂಗ್ರೆಸ್-ಬಿಜೆಪಿ ವಿರುದ್ಧದ ಹೋರಾಟಕ್ಕೆ ಜಾತ್ಯತೀತ ಪಕ್ಷಗಳು ಒಂದಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಅತ್ತ ಹುಬ್ಬಳ್ಳಿಯಲ್ಲಿ ಪತ್ರಕರ್ತರ ಜತೆ ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಪುಸ್ತಕ ಬಿಡುಗಡೆ ಮಾಡುವ ಬದಲು ನೇರವಾಗಿ ಕ್ರಮ ತೆಗೆದುಕೊಳ್ಳಿ ಎಂದು ಯಡಿಯೂರಪ್ಪನವರಿಗೆ ಸವಾಲು ಹಾಕಿದ್ದಾರೆ.

ಗೌಡರು ಮತ್ತು ಅವರ ಕುಟುಂಬದ ಹಗರಣಗಳ ಕುರಿತು ನಿಮ್ಮಲ್ಲಿ ದಾಖಲೆಗಳು ಇದ್ದಲ್ಲಿ ನೇರವಾಗಿ ಕ್ರಮ ಜರಗಿಸಿ. ಇದಕ್ಕೆ ಪುಸ್ತಕ ಬಿಡುಗಡೆ ಮಾಡುವ ತೊಂದರೆ ಯಾಕೆ ಎಂದು ಸಲಹೆ ನೀಡಿದರು.

ತಮ್ಮ ಮೇಲಿನ ಆರೋಪಗಳಿಂದ ನುಣುಚಿಕೊಳ್ಳಲು ಇಂತಹ ಆರೋಪಗಳು ಮುಖ್ಯಮಂತ್ರಿ ಬಾಯಿಯಿಂದ ಬರುತ್ತಿವೆ. ಅವರ ಕೈಯಲ್ಲೇ ಅಧಿಕಾರವಿರುವಾಗ, ನಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಕೆ ಯಾಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಸಂಬಂಧಿತ ಮಾಹಿತಿ ಹುಡುಕಿ