ಚುನಾವಣಾ ಪ್ರಚಾರ ವೇದಿಕೆ ದಿಢೀರ್ ಕುಸಿದ ಪರಿಣಾಮ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮುಖಂಡರು ಬಿದ್ದ ಘಟನೆ ಸೋಮವಾರ ದಂಡೋತಿಯಲ್ಲಿ ನಡೆದಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿದ್ದ ಇಂಧನ ಸಚಿವೆ ಶೋಭಾ ಮತ್ತು ಚಿತ್ತಾಪುರ ಶಾಸಕ ವಾಲ್ಮೀಕಿ ನಾಯಕ್ ಹಾಗೂ ಪ್ರಮುಖರು ಕುಳಿತಿದ್ದ ವೇದಿಕೆ ಕುಸಿದಾಗ ಅವರೆಲ್ಲ ಕೆಳಕ್ಕುರುಳಿದ್ದರು.
ಬಿಜೆಪಿ ಪರ ಪ್ರಚಾರಕ್ಕೆ ವೇದಿಕೆ ಸಿದ್ದಪಡಿಸಲಾಗಿತ್ತು. ಸಚಿವೆ ಶೋಭಾ ಅವರು ಬರುವ ಮೊದಲೇ ವೇದಿಕೆ ಮೇಲೆ 15ರಿಂದ 20 ಜನ ಕುಳಿತಿದ್ದರು. ನಂತರ ಇದೇ ವೇದಿಕೆಗೆ ವಾಲ್ಮೀಕಿ ನಾಯಕ್ ಅವರು ಶೋಭಾ ಅವರನ್ನು ಕರೆತಂದಿದ್ದರು.
ಅವರಿಬ್ಬರೂ ಇತರ ಮುಖಂಡರ ಜತೆ ವೇದಿಕೆ ಹತ್ತಿ ಇನ್ನೇನು ಕಾರ್ಯಕ್ರಮ ಆರಂಭವಾಗಬೇಕು ಎಂಬಷ್ಟರಲ್ಲಿಯೇ ವೇದಿಕೆ ಕುಸಿದು ಇವರು ಅಲ್ಲಿಯೇ ಉರುಳಿಬಿದ್ದರು. ಈ ಸಂದರ್ಭದಲ್ಲಿ ಕೆಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.