ತೆರಿಗೆ ವಂಚನೆ-ಬಳ್ಳಾರಿ ಸಚಿವರನ್ನು ವಜಾ ಮಾಡಿ; ಕಾಂಗ್ರೆಸ್
ಬೆಂಗಳೂರು, ಮಂಗಳವಾರ, 28 ಡಿಸೆಂಬರ್ 2010( 17:53 IST )
ಒಬಳಾಪುರಂ ಅದಿರು ಕಂಪನಿ ಸುಮಾರು 87 ಕೋಟಿ ರೂಪಾಯಿ ತೆರಿಗೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಮಾಲೀಕರಾದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಕಂದಾಯ ಸಚಿವ ಕರುಣಾಕರ ರೆಡ್ಡಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.
ತೆರಿಗೆ ವಂಚಿಸಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಈ ಮೂರು ಮಂದಿಯನ್ನು ಸಚಿವ ಸ್ಥಾನದಿಂದ ಪದಚ್ಯುತಗೊಳಿಸುವುದಲ್ಲದೆ, ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಆಗ್ರಹಿಸಿದ್ದಾರೆ.
ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಹಾಗೂ ವಿ.ಎಸ್.ಉಗ್ರಪ್ಪ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿ ರಾಜಭವನದಿಂದ ಹೊರ ಬಂದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಈ ಮೂರು ಮಂದಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಗತ್ಯ ದಾಖಲೆ ಇಲ್ಲದೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ತಿರುಗೇಟು ನೀಡುತ್ತಿತ್ತು. ಈಗ ಆದಾಯ ತೆರಿಗೆ ಇಲಾಖೆಯ ವರದಿಯಲ್ಲಿ ತೆರಿಗೆ ವಂಚನೆ ಬಯಲಾಗಿರುವುದರಿಂದ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ರಾಜ್ಯಪಾಲರನ್ನು ಒತ್ತಾಯಿಸಲಾಗಿದೆ ಎಂದು ಹೇಳಿದರು.
ಲಾಭದಾಯಕ ಹುದ್ದೆ ಹೊಂದಿರುವ ಸಂಬಂಧ ನೀಡಿದ ದೂರಿನ ಬಗ್ಗೆ ವಿಚಾರಣೆ ನಡೆಸಿ ಚುನಾವಣಾ ಆಯೋಗಕ್ಕೆ ವರದಿ ಕಳುಹಿಸಲಾಗಿದೆ. ಅಂತೆಯೇ ಈ ಪ್ರಕರಣವನ್ನು ಚುನಾವಣಾ ಆಯೋಗಕ್ಕೆ ಕಳುಹಿಸುವಂತೆ ಆಗ್ರಹಿಸಿದರು.