ಸರಕಾರ ನೀಡುವ ಅನುದಾನವನ್ನು ಮಠಗಳು ಸ್ವೀಕರಿಸುವುದು ತಪ್ಪು ಎಂಬುದಾಗಿ ಮಾತೆ ಮಹಾದೇವಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಕೂಡಲ ಸಂಗಮದಲ್ಲಿ ಜನವರಿ 11ರಿಂದ 15ರವರೆಗೆ ನಡೆಯಲಿರುವ ಶರಣ ಮೇಳ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು, ಮಠಗಳಿಗೆ ಸರಕಾರ ನೀಡಿದ ಹಣ ಜನರಿಗೆ ಸೇರಿದ್ದು. ಜನರ ತೆರಿಗೆಯಿಂದ ಮಠ ನಡೆಸುವ ಸ್ಥಿತಿ ನಿರ್ಮಾಣವಾಗಬಾರದು ಎಂದು ಹೇಳಿದರು.
ವಾಮಾಚಾರ, ಮೂಢನಂಬಿಕೆಗಳು ರಾಜಕೀಯ ಕ್ಷೇತ್ರವನ್ನು ಆವರಿಸಿರುವುದು ವಿಷಾದನೀಯ. ಇದರಿಂದ ಯಾವ ಪ್ರಯೋಜನವೂ ಇಲ್ಲ. ಜನರು ವೈಚಾರಿಕತೆ ರೂಢಿಸಿಕೊಂಡರೆ ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಾಗುತ್ತಿರುವ ಲೋಪದೋಷಗಳನ್ನು ಸರಿಪಡಿಸಬಹುದು ಎಂದು ಹೇಳಿದರು.
ಕೂಡಲ ಸಂಗಮ ಶರಣಮೇಳದಲ್ಲಿ ಸುಮಾರು 3.5 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, 11ರಂದು ಶರಣ ಮೇಳದ ಧಾರ್ಮಿಕ ಸಭೆ ನಡೆಯಲಿದೆ. ಸಾವಯವ ಕೃಷಿ ಮೇಳವನ್ನು ರೈತ ಮುಖಂಡ ಕೆ.ಟಿ.ಗಂಗಾಧರ ಉದ್ಘಾಟಿಸಲಿದ್ದಾರೆ. 12ರಂದು ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರು ಶರಣಮೇಳವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.