ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇವನಿಗೆ ಅನುಭವಸ್ಥರು, ರಾಜಕೀಯ ಸೇವೆ ಮಾಡುವವರು ಬೇಕಾಗಿಲ್ಲ. ಯಡಿಯೂರಪ್ಪ ತಾನೇ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾನೆ ಎಂದು ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ವೀರಶೈವ ಸಮಾಜದ ತತ್ವವೇ ಇವನಿಗೆ ಗೊತ್ತಿಲ್ಲ. ಒಳ್ಳೆಯ ಜನರಿಗೆ ಪ್ರೋತ್ಸಾಹ ನೀಡುವುದು ಬಿಟ್ಟು, ಭ್ರಷ್ಟರು, ಕಳ್ಳರಿಗೆ ಕೃಪಾಕಟಾಕ್ಷ ನೀಡಿ ಅಧಿಕಾರದಲ್ಲಿ ಮುಂದುವರಿಯುವ ಯಡಿಯೂರಪ್ಪನಿಂದ ವೀರಶೈವ ಧರ್ಮಕ್ಕೆ ಅವಮಾನವಾಗಿದೆ ಎಂದರು.
ಈ ಸರಕಾರಕ್ಕೆ ಹೆಚ್ಚಿನ ಆಯುಷ್ಯ ಇಲ್ಲ. ಇನ್ನು ಐದಾರು ತಿಂಗಳಲ್ಲಿಯೇ ಈ ಸರಕಾರ ಪತನಗೊಳ್ಳಲಿದೆ. ಅಷ್ಟೇ ಅಲ್ಲ ಎಚ್.ಡಿ.ಕುಮಾರಸ್ವಾಮಿ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಈ ಸಂದರ್ಭದಲ್ಲಿ ಭವಿಷ್ಯ ನುಡಿದರು.
ಆ ಸದ್ದಾಂ ಹುಸೇನ್ ಕೂಡ ಮನಸ್ಸಿಗೆ ಬಂದಂತೆ ಆಡಳಿತ ನಡೆಸಿ, ತನ್ನ ವಿರೋಧಿಗಳನ್ನೆಲ್ಲ ಗುಂಡಿಕ್ಕಿ ಕೊಲ್ಲಿಸಿದ್ದ. ಕೊನೆಗೆ ತಾನೇ ಬಲಿಯಾಗಿ ಹೋದ. ಈ ಯಡಿಯೂರಪ್ಪನ ಸ್ಥಿತಿಯೂ ಅದೇ ರೀತಿ ಆಗಲಿದೆ ಎಂದು ಕಿಡಿಕಾರಿದರು.
ಈ ಹಿಂದೆ ಜಾತ್ಯತೀತ ಜನತಾದಳವನ್ನು ಮರಳುಗಾಡು ಎಂದು ಜರೆದಿದ್ದ ಬೆಂಕಿ ಮಹದೇವ್, ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರಿದ್ದರು. ಅಲ್ಲಿಯೂ ತನಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿದ್ದ 'ಬೆಂಕಿ' ಇತ್ತೀಚೆಗಷ್ಟೇ ಜೆಡಿಎಸ್ ಸೇರ್ಪಡೆಗೊಂಡಿದ್ದರು.