ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಕ್ಕೆ ಕಾಂಗ್ರೆಸ್ ಪಕ್ಷ ಕಾರಣ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ತಾಲೂಕಿನ ಇರಕಲ್ಗಡಾ ಗ್ರಾಮದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸುಮಾರು 60 ವರ್ಷಕ್ಕಿಂತಲೂ ಹೆಚ್ಚು ಕಾಲ ಆಡಳಿತ ನಡೆಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದೆ. ಒಂದು ವೇಳೆ ಬಿಜೆಪಿಯಂತೆ ಭ್ರಷ್ಟಾಚಾರದಲ್ಲಿ ನಿರತರಾಗಿದ್ದರೆ ರಾಜ್ಯ ಬೇರೆಯವರ ಪಾಲಾಗಿರುತ್ತಿತ್ತು. ಕಾಂಗ್ರೆಸ್ ಪಕ್ಷದ ನಿಷ್ಪಕ್ಷಪಾತ ಆಡಳಿತದಿಂದಲೇ ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಸಾಧ್ಯವಾಗಿದೆ ಎಂದರು.
ಆಡಳಿತ ನಡೆಸುವ ಸರಕಾರ ತಪ್ಪು ದಾರಿಗೆ ಹೋದಾಗ ಪ್ರತಿ ಪಕ್ಷಗಳು ಎತ್ತಿ ತೋರಿಸುವುದು ತಪ್ಪಾ?. ಬಿಜೆಪಿ ನೇತೃತ್ವದ ಸರಕಾರ ಅನೈತಿಕ ಮಾರ್ಗ ಹಿಡಿದಾಗ ಈ ಬಗ್ಗೆ ಪ್ರಶ್ನಿಸಲಾಗಿದೆ. ತಪ್ಪನ್ನು ಎತ್ತಿ ಹಿಡಿದಿದ್ದಕ್ಕೆ ಆಡಳಿತಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎಂದು ಬಿಜೆಪಿ ಮುಖಂಡರುಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.
ಭ್ರಷ್ಟಾಚಾರದ ವಿಶೇಷ ತಜ್ಞರಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸದಿಲ್ಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೂ ನಡೆಸಿರುವ ಭ್ರಷ್ಟಾಚಾರವನ್ನು ದೇಶವ್ಯಾಪಿ ಹರಡುವುದಕ್ಕಾಗಿಯೇ ರಾಷ್ಟ್ರರಾಜಕಾರಣಕ್ಕೆ ತೆರಳುವುದಾಗಿ ಹೇಳಿದ್ದಾರೆಂದು ವ್ಯಂಗ್ಯವಾಡಿದರು.