ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾನು ಕೆಲಸ ಹುಡುಕಿಕೊಂಡು ಬಂದಿಲ್ಲ: ಬಿಜೆಪಿಗೆ ರಾಜ್ಯಪಾಲ (BS Yeddyurappa | HR Bharadhwaj | Karnataka | BJP)
Bookmark and Share Feedback Print
 
ರಾಜ್ಯದಲ್ಲಿ ಬಹಿರಂಗವಾಗಿ ಹಣ ಲೂಟಿ ಮತ್ತು ತೆರಿಗೆ ವಂಚನೆ ಮಾಡಲಾಗುತ್ತಿದೆ. ಯಾವ ಹೊತ್ತಿನಲ್ಲಿ ನನ್ನ ಹಕ್ಕುಗಳನ್ನು ಚಲಾಯಿಸಬೇಕೆನ್ನುವುದು ನನಗೆ ಗೊತ್ತಿದೆ. ನಾನೇನು ನೌಕರಿ ಹುಡುಕಿಕೊಂಡು ಇಲ್ಲಿಗೆ ಬಂದಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಸರಕಾರದ ವಿರುದ್ಧ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮತ್ತೆ ಚಾಟಿ ಬೀಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ವಿಶ್ವ ಉರ್ದು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಅವರು ಪತ್ರಕರ್ತರ ಜತೆ ಮಾತನಾಡುತ್ತಾ, ರಾಜ್ಯದಲ್ಲಿನ ಅಕ್ರಮ ಹಣದ ವರ್ಗಾವಣೆ ಮತ್ತು ತೆರಿಗೆ ವಂಚನೆ ರಾಜಾರೋಷವಾಗಿ ನಡೆಯುತ್ತಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲೂ ಚರ್ಚೆಗಳು ನಡೆಯುತ್ತಿವೆ ಎಂದು ಸರಕಾರದ ಮೇಲೆ ಗಂಭೀರ ಆರೋಪ ಮಾಡಿದರು.

ಓಬಳಾಪುರಂ ಗಣಿ ಕಂಪನಿ ಮಾಲೀಕರು, ಸಚಿವರಾದ ಜನಾರ್ದನ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಮತ್ತು ಬಿ. ಶ್ರೀರಾಮುಲು 86 ಕೋಟಿ ರೂಪಾಯಿ ತೆರಿಗೆ ವಂಚಿಸಿದ್ದಾರೆ ಎಂಬ ಆದಾಯ ತೆರಿಗೆ ಇಲಾಖೆಯ ವರದಿಯ ಕುರಿತು ಪ್ರತಿಕ್ರಿಯಿಸಿದ ರಾಜ್ಯಪಾಲರು, ಇದು ಈಗ ರಹಸ್ಯವಲ್ಲ. ಎಲ್ಲವೂ ಬಹಿರಂಗವಾಗಿದೆ ಎಂದರು.

ಭೂ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಿಚಾರಣೆಗೆ ಅನುಮತಿ ನೀಡುವಂತೆ ಕೋರಿ ಇಬ್ಬರು ವಕೀಲರು ಸಲ್ಲಿಸಿರುವ ದೂರು ತುಂಬಾ ದೀರ್ಘವಾಗಿದೆ. ಅದನ್ನು ಪರಿಶೀಲನೆ ನಡೆಸಿದ ನಂತರ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಅದೇ ರೀತಿ ಕಾಂಗ್ರೆಸ್ ನಾಯಕರಾದ ವಿ.ಎಸ್. ಉಗ್ರಪ್ಪ ಮತ್ತು ಕೆ.ಸಿ. ಕೊಂಡಯ್ಯ ಅವರು ಈ ಹಿಂದೆಯೇ ದೂರು ನೀಡಿದ್ದರು. ಈಗ ಮತ್ತೆ ನೀಡಿದ್ದಾರೆ. ಸಂವಿಧಾನಬದ್ಧವಾಗಿ ಸೂಕ್ತ ತೀರ್ಮಾನಕ್ಕೆ ಬರುತ್ತೇನೆ ಎಂದು ಭಾರದ್ವಾಜ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾವು ಕಾಂಗ್ರೆಸ್ ಏಜೆಂಟ್ ಎಂಬ ಆರೋಪವನ್ನು ಬಿಜೆಪಿ ಮಾಡುತ್ತಿದೆ ಎಂದಾಗ, ನನ್ನ ಕೆಲಸವನ್ನು ನಾನು ಸರಿಯಾಗಿ ನಿರ್ವಹಿಸುತ್ತಿದ್ದೇನೆ. ಹಲವು ವರ್ಷಗಳಿಂದ ರಾಜಕೀಯದಲ್ಲಿ ಇದ್ದವ ನಾನು. ಯಾವ ಸಂದರ್ಭದಲ್ಲೂ ಕಾನೂನು ಮೀರಿಲ್ಲ ಎಂದರು.

ಅಷ್ಟಕ್ಕೂ ನಾನು ನೌಕರಿ ಅರಸುತ್ತ ಇಲ್ಲಿಗೆ ಬಂದವನಲ್ಲ. ಅದರ ಅಗತ್ಯವೂ ನನಗಿಲ್ಲ. ಅದನ್ನೆಲ್ಲ ಈಗಾಗಲೇ ಮುಗಿಸಿದ್ದೇನೆ. ಇನ್ನು ನನ್ನ ಮುಂದಿರುವುದು ಸಾಧ್ಯವಾದಷ್ಟು ಜನಸೇವೆ. ನಾನು ಈ ರಾಜ್ಯದ ಮುಖ್ಯಸ್ಥ ಮತ್ತು ವಿಧಾನಸಭೆಯ ಭಾಗ. ಯಾರನ್ನೂ ಕಾನೂನು ಮೀರಲು ಅವಕಾಶ ನೀಡುವುದಿಲ್ಲ ಎಂದು ಆರೋಪಗಳಿಗೆ ತಿರುಗೇಟು ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ