ಆಡಳಿತಾರೂಢ ಕೋಮುವಾದಿ ಬಿಜೆಪಿ ಸರಕಾರವನ್ನು ಉರುಳಿಸಿ, ಜಾತ್ಯತೀತ ಪಕ್ಷಕ್ಕೆ ಬೆಂಬಲ ನೀಡಿ ಎಂದು ಹೇಳಿಕೆ ನೀಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೋಮುವಾದಿ ಪಕ್ಷ ಬಿಜೆಪಿ ಜೊತೆ ಸಖ್ಯ ಬೆಳೆಸಿ 20 ತಿಂಗಳು ಸರಕಾರ ನಡೆಸಿದ ಮೇಲೂ ನೀವು ಹೇಗೆ ಜಾತ್ಯತೀತರಾಗುತ್ತೀರಿ ಎಂದು ಸಂಸದ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಭೇರ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ಅಲ್ಪಸಂಖ್ಯಾತರು, ಮುಸ್ಲಿಮ್ ಜನಾಂಗದವರು ಜೆಡಿಎಸ್ ಹೇಗೆ ಜಾತ್ಯತೀತ ಪಕ್ಷವಾಗುತ್ತದೆ ಎಂಬುದನ್ನು ಯೋಚಿಸಬೇಕು. 20 ತಿಂಗಳು ಬಿಜೆಪಿ ಜೊತೆ ಸರಕಾರ ನಡೆಸಿದ ಮೇಲೆ ಜೆಡಿಎಸ್ ಕೋಮುವಾದಿ ಅಲ್ಲವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ಗೆ ಪರ್ಯಾಯವಾಗಿ ಜೆಡಿಎಸ್ ಇಲ್ಲ. ಆದ್ದರಿಂದ ಕುಮಾರಸ್ವಾಮಿ ಒಬ್ಬ ಗೋಮುಘ ವ್ಯಾಘ್ರ ಎಂದು ಟೀಕಿಸಿದರು. ದೇವೇಗೌಡ ಮತ್ತು ಕುಮಾರಸ್ವಾಮಿ ಮತ್ತೆ ಜನರನ್ನು ನಂಬಿಸಲು ನಾಟಕವಾಡುತ್ತಿದ್ದಾರೆ. ಹಾಗಾಗಿ ಮತದಾರರು ಅವರನ್ನು ನಂಬಬೇಡಿ ಎಂದು ಮನವಿ ಮಾಡಿಕೊಂಡರು.