ಚುನಾವಣೆಯಲ್ಲಿ ಹಣ, ಹೆಂಡ ಹಂಚಿ, ಕಾಲಿಗೆ ಬಿದ್ದು ಮತಯಾಚನೆ ಮಾಡೋದು ಸಾಮಾನ್ಯ. ಆದರೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಎನ್ನುವುದು ಹೊಸ ಪದ್ಧತಿ. ಈ ರೀತಿ ವಿನೂತನವಾಗಿ ಮತಯಾಚಿಸಿದವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ.
ಜೆಡಿಎಸ್ ರಾಜ್ಯಾಧ್ಯಕ್ಷ ಕೆ.ಆರ್.ನಗರ ತಾಲೂಕಿನ ಭೇರ್ಯ, ಮಿರ್ಲೆ, ಸಾಲಿಗ್ರಾಮ ಕ್ಷೇತ್ರಗಳ ಜಿ.ಪಂ. ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲು ರಾತ್ರಿ ಭೇರ್ಯ ಗ್ರಾಮಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ಸಾವಿರಾರು ಗ್ರಾಮಸ್ಥರು ಕುಮಾರಸ್ವಾಮಿಗಾಗಿ ಕಾದರೂ ಬಂದಿರಲಿಲ್ಲವಾಗಿತ್ತು. ಇದರಿಂದ ನಿರಾಸೆಗೊಂಡ ಗ್ರಾಮಸ್ಥರು ಮನೆಯತ್ತ ತೆರಳತೊಡಗಿದ್ದರು. ಇದನ್ನು ಗಮನಿಸಿದ ಜೆಡಿಎಸ್ ಅಭ್ಯರ್ಥಿ ಮಂಜುಳಾ ಅವರ ಪತಿ ಎಂ.ಟಿ.ಕುಮಾರ್ ಮಾಜಿ ಮುಖ್ಯಮಂತ್ರಿಗಳಿಗೆ ವಿಷಯ ಮುಟ್ಟಿಸಿದರು.
ಕೂಡಲೇ ಕುಮಾರಸ್ವಾಮಿ ಮೊಬೈಲ್ ಮೂಲಕವೇ ಭಾಷಣ ಆರಂಭಿಸಿದರು. ಮೈಕ್ ಮುಂದೆ ಎಂ.ಟಿ.ಕುಮಾರ್ ಅವರು ಮೊಬೈಲ್ ಹಿಡಿದು ಜನರಿಗೆ ತಮ್ಮ ನಾಯಕನ ಭಾಷಣ ಕೇಳಿಸಿದರು. ಮೊಬೈಲ್ ಮೂಲಕ ಬರುತ್ತಿದ್ದ ಮಾತುಗಳನ್ನು ಕೇಳಿ ಚಪ್ಪಾಳೆ ಹೊಡೆದು ಕುಮಾರಸ್ವಾಮಿಗೆ ಜೈಕಾರ ಹಾಕಿ ಸಂತಸ ಪಟ್ಟರು.
ತದನಂತರ ಮಧ್ಯರಾತ್ರಿ ಹೊತ್ತಿಗೆ ಕುಮಾರಸ್ವಾಮಿ ಅವರು ಖುದ್ದಾಗಿ ಭೇರ್ಯ ಪ್ರದೇಶಕ್ಕೆ ಭೇಟಿ ನೀಡಿ ಕಾರ್ಯಕರ್ತರನ್ನು ಮಾತನಾಡಿಸಿದರು. ಅಲ್ಲದೇ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.