ಬಳ್ಳಾರಿಯ ಸಚಿವತ್ರಯರಿಗೆ ಬಿಜೆಪಿ ಎಂದೂ ಕ್ಲೀನ್ ಚಿಟ್ ನೀಡಿಲ್ಲ. ಆದಾಯ ತೆರಿಗೆಗೆ ಸಂಬಂಧಿಸಿದ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಗುರುವಾರ ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವರಾದ ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ತೆರಿಗೆ ಇಲಾಖೆಯ ಅಧಿಕೃತ ವರದಿ ಬಂದ ನಂತರ ಪಕ್ಷದಲ್ಲಿ ಚರ್ಚಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಚಿವತ್ರಯರಿಗೆ ಬಿಜೆಪಿ ಕ್ಲೀನ್ ಚಿಟ್ ಆಗಲಿ, ಬ್ಲಾಕ್ ಚಿಟ್ ಆಗಲಿ ನೀಡಿಲ್ಲ. ಈ ಪ್ರಕರಣದಲ್ಲಿ ಸಚಿವರು ನಿರಪರಾಧಿಗಳು ಎನ್ನುವುದನ್ನು ಅವರುಗಳೇ ಸಾಬೀತುಪಡಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ವಿರೋಧ ಪಕ್ಷದ ನಾಯಕರಂತೆ ವರ್ತಿಸುವುದನ್ನು ಮುಂದುವರಿಸಿದ್ದಾರೆ. ಅವರಿಗೆ ಸರಕಾರವನ್ನು ಟೀಕಿಸುವುದು ಬಿಟ್ಟು ಉದ್ಯೋಗ ಇಲ್ಲ ಎಂದು ವಾಗ್ದಾಳಿ ನಡೆಸಿದರು. ರಾಜ್ಯಪಾಲರ ವೃತ್ತಿಗೆ ಘನತೆ, ಗೌರವ ಮರೆತು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.