ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರಿಗೆ ಇರುವ ಅನುಮಾನ ಹೊಸತಲ್ಲ. ಆದರೆ ರಾಜ್ಯಪಾಲರ ಜತೆ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತೇನೆ ಎಂದು ಹೇಳಿರುವುದು ಹುತ್ತವಾಗಿದೆ.
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ವಿರುದ್ಧ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ದೂರು ನೀಡುವುದಾಗಿ ಹೇಳುತ್ತಿದ್ದ ಮುಖ್ಯಮಂತ್ರಿ ಇದ್ದಕ್ಕಿದ್ದಂತೆ ತನ್ನ ವರಸೆ ಬದಲಿಸಿದ್ದಾರೆ. ಇನ್ನು ಮುಂದೆ ರಾಜ್ಯಪಾಲರ ಜತೆ ಸೌಹಾರ್ದವಾಗಿ ನಡೆದುಕೊಳ್ಳುತ್ತೇನೆ ಎಂದಿದ್ದಾರೆ. ಆ ಮೂಲಕ ಮೃದುಧೋರಣೆಗೆ ಮರಳಿದ್ದಾರೆ. ಇದರ ಹಿಂದಿನ ಗುಟ್ಟೇನು ಎಂಬುದು ತಿಳಿಯುತ್ತಿಲ್ಲ ಎಂದು ಕುಮಾರಸ್ವಾಮಿ ಶಂಕೆ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಬಿಜೆಪಿ ನಾಯಕರು ಇತ್ತೀಚಿನ ದಿನಗಳಲ್ಲಿ ರಾಜ್ಯಪಾಲರನ್ನು ವಾಚಮಗೋಚರವಾಗಿ ಬೈದಿದ್ದಾರೆ. ಈಗ ಸಲಹೆ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ತಿಂಗಳಿಗೆ ಎರಡು ಬಾರಿ ರಾಜ್ಯಪಾಲರನ್ನು ಭೇಟಿಯಾಗುತ್ತೇನೆ, ನಮ್ಮ ನಡುವಿನ ಸಂವಹನ ಕೊರತೆಯನ್ನು ನೀಗಿಸುತ್ತೇನೆ ಎಂದು ಗೋಸುಂಬೆ ಆಟಕ್ಕೆ ಚಾಲನೆ ನೀಡಿದ್ದಾರೆ. ಇವರಿಗೆ ಯಾವಾಗ ಜ್ಞಾನೋದಯವಾಯಿತು ಎಂದು ಲೇವಡಿ ಮಾಡಿದರು.
ಸಚಿವ ಜನಾರ್ದನ ರೆಡ್ಡಿ ಸರಕಾರಕ್ಕೆ 86 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿರುವ ಬಗ್ಗೆಯೂ ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕಿಡಿ ಕಾರಿದರು.
ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ಯಡಿಯೂರಪ್ಪ ಜವಾಬ್ದಾರಿಯುತವಾಗಿ ಮಾತನಾಡುವ ಬದಲು ತೆರಿಗೆ ವಂಚಿಸಿದ ಸಚಿವರನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಇದು ಆ ಸ್ಥಾನಕ್ಕೆ ಗೌರವ ತರುವ ವಿಚಾರವೇ ಎಂದು ಪ್ರಶ್ನಿಸಿದರು.
ಪ್ರಸಕ್ತ ಸಾಗುತ್ತಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಜೆಡಿಎಸ್ ಉತ್ತಮ ಸಾಧನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕುಮಾರಸ್ವಾಮಿ, ಇದರಿಂದ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರದೇ ಇದ್ದರೂ ಅದರ ಭವಿಷ್ಯ ನಿರ್ಧಾರವಾಗುವುದಂತೂ ಖಚಿತ ಎಂದರು.