ಪುಟ್ಟಣ್ಣ ವಿರುದ್ಧ ಅವಿಶ್ವಾಸ ನಿರ್ಣಯ ಬೇಡ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ, ಶುಕ್ರವಾರ, 31 ಡಿಸೆಂಬರ್ 2010( 17:35 IST )
ವಿಧಾನ ಪರಿಷತ್ ಉಪ ಸಭಾಪತಿ ಪುಟ್ಟಣ್ಣ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ನೀಡಿರುವ ನೋಟಿಸ್ ಅನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಪುಟ್ಟಣ್ಣ ಟೀಕಿಸಿದ್ದಾರೆ. ಇದನ್ನೇ ನೆಪಮಾಡಿಕೊಂಡು ವಿಧಾನ ಪರಿಷತ್‌ನಲ್ಲಿ ಬಹುಮತ ಹೊಂದಿರುವ ಬಿಜೆಪಿ ಅವಿಶ್ವಾಸ ಮಂಡಿಸಲು ನಿರ್ಧರಿಸಿದೆ.
ಉಪ ಸಭಾಪತಿಯಾಗಿ ಪುಟ್ಟಣ್ಣ ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರೆ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಲಿ. ಕಾಗೇರಿಯವರನ್ನು ಟೀಕೆ ಮಾಡಿದ್ದನ್ನೇ ನೆಪ ಮಾಡಿಕೊಂಡು ಅವಿಶ್ವಾಸ ನಿರ್ಣಯ ಮಂಡಿಸುತ್ತಿರುವುದು ನೋಡಿದರೆ ಬಿಜೆಪಿಗೆ ನೈತಿಕತೆಗಿಂತ ಅಧಿಕಾರವೇ ಮುಖ್ಯವೆಂದು ಕಾಣುತ್ತದೆ ಎಂದು ದೂರಿದರು.
ಉಪಸಭಾಪತಿ ಸ್ಥಾನವನ್ನು ಪ್ರತಿಪಕ್ಷಗಳಿಗೆ ಬಿಟ್ಟು ಕೊಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಅಧಿಕಾರದ ಲಾಲಸೆ ಹೊಂದಿರುವ ಬಿಜೆಪಿ ಈಗ ಅದನ್ನು ಕಿತ್ತುಕೊಳ್ಳಲು ಪ್ರಯತ್ನ ನಡೆಸುತ್ತಿರುವುದು ರಾಜ್ಯದ ಇತಿಹಾಸದಲ್ಲಿಯೇ ಕಪ್ಪುಚುಕ್ಕೆಯಾಗಿದೆ. ಅಧಿಕಾರಕ್ಕಾಗಿ ಬಿಜೆಪಿ ಎಂತಹ ಹೀನ ಕೃತ್ಯಕ್ಕೂ ಹಿಂಜರಿಯುವುದಿಲ್ಲ ಎಂಬುದು ಇದರಿಂದ ಸಾಬೀತಾದಂತಾಗಿದೆ ಎಂದರು.
ಶಿಕ್ಷಣ ಇಲಾಖೆಯ ಕಾರ್ಯ ನಿರ್ವಹಿಸುವಲ್ಲಿ ಸಚಿವ ಕಾಗೇರಿ ಸಂಪೂರ್ಣ ವಿಫಲರಾಗಿದ್ದಾರೆ. ಇದರಿಂದಾಗಿ ಇಡೀ ಶಿಕ್ಷಣ ವ್ಯವಸ್ಥೆಯೇ ಹಾಳಾಗುತ್ತಿದೆ. ಅದಕ್ಕಾಗಿಯೇ ಕಾಗೇರಿ ಸಚಿವರಾಗಿ ಇರುವವರೆಗೂ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅಧಿವೇಶನದಲ್ಲಿ ಕೇಳಬಾರದೆಂದು ನಿರ್ಧರಿಸಿದ್ದೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.