ದೇಶದಲ್ಲಿ ಸಾರ್ವತ್ರಿಕ ಭ್ರಷ್ಟಾಚಾರಕ್ಕೆ ಮುದ್ರೆ ಒತ್ತಿದ ಪ್ರಥಮ ವ್ಯಕ್ತಿ ಮಾಜಿ ಪ್ರಧಾನಿ ಇಂದಿರಾಗಾಂಧಿ. ಭ್ರಷ್ಟಾಚಾರದ ಬೀಜ ಬಿತ್ತಿದವರೇ ಕಾಂಗ್ರೆಸ್ಸಿಗರು ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ್ ಆರೋಪಿಸಿದರು.
ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯ ಜ್ಞಾನ ಸಹ್ಯಾದ್ರಿ ಆವರಣದ ಪ್ರೊ. ಎಸ್.ಪಿ.ಹಿರೇಮಠ ಸಭಾಂಗಣದಲ್ಲಿ ಕುವೆಂಪು ಅವರ 106ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುಗದಲ್ಲಿ ಯುವ ಪೀಳಿಗೆಗೆ ಆದರ್ಶ ವ್ಯಕ್ತಿಗಳೇ ಕಾಣುತ್ತಿಲ್ಲ. ರಾಷ್ಟ್ರೀಯ ನಾಯಕರೆಂದು ಕರೆಸಿಕೊಳ್ಳುವ, ಯಾರಲ್ಲೂ ಮೌಲಿಕ ಗುಣಗಳೇ ಇಲ್ಲ. ಸ್ವಯಂ ಘೋಷಿತ ನಾಯಕರು ಬಹಳಷ್ಟು ಮಂದಿ ಇದ್ದಾರೆ. ಇವರಿಂದ ಭ್ರಷ್ಟಾಚಾರದ ಪಾಠ ಬಿಟ್ಟರೆ ಬೇರೇನೂ ಕಲಿಯಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ನಲ್ಲಿ ನಿಂತರೆ ಕೂರಲಾಗದೆ, ಕುಂತರೆ ನಿಲ್ಲಲಾಗದ ಮುದಿಗೂಬೆಗಳು ತುಂಬಿಕೊಂಡಿವೆ. ಬಿಜೆಪಿಯಲ್ಲಿ ನಿತಿನ್ ಗಡ್ಕರಿಯಂತಹ ದಢೂತಿ ದೇಹದ ಮನುಷ್ಯರು, ಯಡಿಯೂರಪ್ಪರಂತಹ ಭ್ರಷ್ಟಾತಿ ಭ್ರಷ್ಟರು ನಾಡಿಗೆ ನಾಡನ್ನೇ ಮಾರಲು ಹೊರಟಿದ್ದಾರೆ. ದೇವೇಗೌಡರು ವೇದಿಕೆಯಲ್ಲಿ ಕುಳಿತು ಯೋಚನೆ ಮಾಡುತ್ತಾರೋ, ನಿದ್ರೆ ಮಾಡತ್ತಾರೋ ಅಥವಾ ಲೋಕವನ್ನೇ ಬಿಟ್ಟು ಹೋಗಿರುತ್ತಾರೋ ಗೊತ್ತಾಗುವುದಿಲ್ಲ ಎಂದು ಕುಟುಕಿದರು.
ರಾಜಕಾರಣಿಗಳು ಹುಟ್ಟು ಭ್ರಷ್ಟರೆಂದು ಪ್ರತಿಯೊಬ್ಬರೂ ತೀರ್ಮಾನಿಸುವುದರಿಂದ ಅವರೆಲ್ಲ ಯುವಪೀಳಿಗೆಗೆ ಆದರ್ಶವಾಗುವುದಿಲ್ಲ. ಚುನಾವಣೆಗೆ ಸ್ಪರ್ಧಿಸುವವರಲ್ಲಿ ಕಡಿಮೆ ಭ್ರಷ್ಟರೆಂದು ಆಯ್ಕೆ ಮಾಡಿದವರು ಹಿಂದಿನವರನ್ನು ಮೀರಿಸುವ ಭ್ರಷ್ಟಾಚಾರವೆಸಗುತ್ತಿದ್ದಾರೆ. ಹೀಗಾಗಿ ಮತದಾರರಿಗೆ ಆಯ್ಕೆಗಳೇ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.