ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜೇಟ್ಲಿ ಬಂದಿದ್ದು ಸಿಎಂ ರಕ್ಷಣೆಗೆ, ಭ್ರಷ್ಟಾಚಾರ ನಿಗ್ರಹಕ್ಕಲ್ಲ: ಗೌಡ (Arun Jaitly | BJP | Yeddyurappa | Deve gowda | Congress)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪದಕೋಶದಲ್ಲಿ ಮಾನ-ಮರ್ಯಾದೆ ಎಂಬ ಪದಗಳೇ ಇಲ್ಲ. ಅಂಥವರ ರಕ್ಷಣೆಗೆ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಬಂದಿದ್ದಾರೆಯೇ ಹೊರತು ಭ್ರಷ್ಟಾಚಾರ ನಿಗ್ರಹಕ್ಕಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವ್ಯಂಗ್ಯವಾಡಿದ್ದಾರೆ.
ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆಯಲ್ಲಿ ಶುಕ್ರವಾರ ಮತದಾನ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತಿಯೊಂದು ಹಂತದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು, ತಮ್ಮ ವಿರುದ್ಧ ದಾಖಲೆ ಸಮೇತ ಆರೋಪ ಬಂದ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಮೂಲಕ ಮೌಲ್ಯಧಾರಿತ ರಾಜಕಾರಣ ಎತ್ತಿ ಹಿಡಿಯಬೇಕಿತ್ತು. ಇದರ ಬದಲು ಭ್ರಷ್ಟಾಚಾರ ಮಾಡಲೇ ನಾನಿದ್ದೇನೆ ಎಂಬ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಯಡಿಯೂರಪ್ಪನ ಡಿಕ್ಷನರಿಯಲ್ಲಿ ಮಾನ, ಮರ್ಯಾದೆ ಎಂಬ ಪದಗಳೂ ಇಲ್ಲ. ಅವುಗಳೇನೆಂದು ಗೊತ್ತೇ ಇಲ್ಲಂತ ಕಾಣಿಸುತ್ತಿದೆ. ಒಂದು ಬಾರಿ ಯಾವುದೇ ಭ್ರಷ್ಟಾಚಾರ ಎಸಗಿಲ್ಲ ಎಂದು ಹೇಳಿದರೇ ಮತ್ತೊಂದು ಬಾರಿ ಕಾನೂನು ಬಾಹಿರವಾಗಿ ಪಡೆದ ನಿವೇಶನ ಮತ್ತಿತರ ಆಸ್ತಿಯನ್ನು ಹಿಂತಿರುಗಿಸುವುದಾಗಿ ಹೇಳುತ್ತಾರೆ. ಇನ್ನೂ ನೀಡಿಲ್ಲ. ಇಂಥ ಮನುಷ್ಯ ದೇವೇಗೌಡ ಮತ್ತು ಆತನ ಕುಟುಂಬ ಅಕ್ರಮವಾಗಿ ಆಸ್ತಿ ಹೊಂದಿದೆ ಎಂದು ಹೊಳೆನರಸೀಪುರಕ್ಕೆ ತನಿಖಾ ತಂಡಾ ಕಳುಹಿಸುತ್ತಾರೆ. ಏನೂ ಸಿಗದೇ ಇದ್ದರೂ ಅದಕ್ಕೆ ಬೇರೆ ರೀತಿಯ ರೂಪ ನೀಡಿ ವಿತಂಡವಾದ ಮಂಡಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.