ರಾಜ್ಯ ಮತ್ತು ಕೇಂದ್ರ ಸರಕಾರದಲ್ಲಿರುವ ಚುನಾಯಿತ ಪ್ರತಿನಿಧಿಗಳು ಜನಪರವಾದ ಯಾವುದೇ ನೀತಿಗಳನ್ನು ತರುವ ಚರ್ಚೆಗಳಲ್ಲಿ ಭಾಗವಹಿಸಿಲ್ಲ. ಅದಕ್ಕೆ ಇತ್ತೀಚೆಗೆ ನಡೆದ ಸಂಸತ್ ಕಲಾಪ ವ್ಯರ್ಥವಾಗಿದ್ದೇ ಸಾಕ್ಷಿ. ಆದ್ದರಿಂದ ಅವರು ಜನಪ್ರತಿನಿಧಿಗಳಲ್ಲ ಜನಕಂಟಕರು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪುರಭವನದ ಮುಂಭಾಗದಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಶುಕ್ರವಾರ, ರಾಜ್ಯ ಹಾಗೂ ಕೇಂದ್ರ ಸರಕಾರಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದನ್ನು ವಿರೋಧಿಸಿ ಏರ್ಪಡಿಸಿದ್ದ ಬೈಕ್ ರಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಜೆಪಿ ನೇತೃತ್ವದ ರಾಜ್ಯ ಸರಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ. ಹಗರಣಗಳ ಹಿನ್ನೆಲೆಯಲ್ಲಿ ಐದಾರು ಮಂದಿ ಸಚಿವರು ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯು ಸರಕಾರ ಎಷ್ಟೊಂದು ಅಸಮರ್ಥವಾಗಿದೆ ಎಂಬುದನ್ನು ಸೂಚಿಸುತ್ತದೆ. ಮತ್ತೊಂದೆಡೆ ಪಕ್ಷದ ವರಿಷ್ಠರು ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದು ನೋಡಿದರೆ ಅವರೂ ಬೆಂಬಲ ನೀಡಿದ್ದಾರೆಯೇ ಎಂಬ ಸಂಶಯ ಬರುತ್ತದೆ ಎಂದು ಟೀಕಿಸಿದರು.