ಹೊಸ ವರ್ಷದಲ್ಲಿ ಬಿಜೆಪಿ ಸರಕಾರ ಪತನಗೊಂಡು ಹೊಸ ರಾಜಕೀಯ ಅಧ್ಯಾಯ ಆರಂಭವಾಗಲಿದೆ ಎಂದು ಜೆಡಿಎಲ್‌ಪಿ ನಾಯಕ ಎಚ್.ಡಿ.ರೇವಣ್ಣ ಭವಿಷ್ಯ ನುಡಿದಿದ್ದಾರೆ.
ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಪಂ, ತಾಪಂ ಚುನಾವಣೆ ನಂತರ ಬಿಜೆಪಿ ಶಾಸಕರು, ಸಚಿವರು, ಮುಖಂಡರು ಒಬ್ಬರಿಗೊಬ್ಬರು ಕಿತ್ತಾಡಿಕೊಂಡೇ ಸಿಎಂ ಮನೆಗೆ ಹೋಗುವ ಕಾಲ ಸನ್ನಿಹಿತವಾಗುತ್ತದೆ. ಸರಕಾರವನ್ನು ಯಾರು ಬೀಳಿಸಲೆತ್ನಿಸಬೇಕಿಲ್ಲ. ಆ ಡ್ರಾಮ ನೋಡೋದಷ್ಟೇ ನಮ್ಮ ಕೆಲಸ ಎಂದರು.
ಜಿಲ್ಲೆಗೆ ಸಿಎಂ ಭೇಟಿ ನೀಡಿದ ಸಂದರ್ಭ ಪಾಳೆಗಾರಿಕೆ ಅಂತ್ಯಕಾಣಿಸುವುದಾಗಿ ಹೇಳಿದ್ದಾರೆ. ಯಡಿಯೂರಪ್ಪ ಅವರ ಪಾಳೆಗಾರಿಕೆ ಅಂತ್ಯ ಕಾಣುತ್ತದೋ ? ಜಿಲ್ಲೆಯದ್ದೋ ನೋಡೇ ಬಿಡೋಣ ಎಂದು ಸವಾಲು ಹಾಕಿದರಲ್ಲದೆ, 40 ವರ್ಷ ರಾಜಕೀಯ ಇತಿಹಾಸದಲ್ಲಿ ಇಲ್ಲದ ಪಾಳೆಗಾರಿಕೆ ಈಗ ಆರಂಭಿಸಿದವರು ಯಾರು ಎಂಬುದು ಜನತೆಗೆ ತಿಳಿದಿದೆ ಎಂದರು.
ಬಿಜೆಪಿ, ಕಾಂಗ್ರೆಸ್ ಹೊಂದಾಣಿಕೆಯಿಂದ ಜಿಪಂ, ತಾಪಂ ಚುನಾವಣೆಯಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಜೆಡಿಎಸ್ ಸೋಲಿಸಬೇಕು ಎಂಬ ದುರುದ್ದೇಶದಿಂದ ಬಿಜೆಪಿ 500 ಕೋಟಿ ರೂ. ಖರ್ಚು ಮಾಡಿದೆ. ಮತದಾರರಿಗೆ 108 ಆಂಬ್ಯುಲೆನ್ಸ್‌ನಲ್ಲಿ ಹಣ, ಮದ್ಯ ಸಾಗಿಸಿ ವಿತರಿಸಲಾಗಿದೆ ಎಂದ ಅವರು, ಜೆಡಿಎಸ್‌ಗೆ ಜಿಲ್ಲೆಯ ಜನರ ಬೆಂಬಲ ಇದ್ದು, ಚುನಾವಣೆಯಲ್ಲಿ ಗೆದ್ದು ಜಿಪಂ ಅಧಿಕಾರವನ್ನು ಮರಳಿ ಪಡೆಯುವುದು ನಿಶ್ಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು.