ಜಿಪಂ, ತಾಪಂ ಚುನಾವಣೆಗೆ ಮೀಸಲು ನಿಗದಿಯು ಅಸಮರ್ಪಕವಾಗಿದ್ದು, ಹಲವು ಜಾತಿಗಳಿಗೆ ಅನ್ಯಾಯವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.
ತಾಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮೂರು ಹಂತಗಳಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇದೆ. ಆದರೆ ರಾಜ್ಯ ಸರಕಾರ ಮೀಸಲು ನೀತಿಯನ್ನು ಸರಿಯಾಗಿ ಆಳವಡಿಸಿಕೊಳ್ಳದ ಕಾರಣ ಪ್ರಸ್ತುತ ಕೆಲ ಜಾತಿಗಳು ಸವಲತ್ತುಗಳಿಂದ ವಂಚಿತರಾಗಿದ್ದಾರೆ ಎಂದು ದೂರಿದರು.
ಸ್ಪೆಕ್ಟ್ರಂ ಹಗರಣ ಸಂಬಂಧ 2001ರಿಂದಲೂ ತನಿಖೆ ನಡೆಯಬೇಕೆಂಬ ಪ್ರತಿಪಕ್ಷಗಳ ನಿಲುವು ಸಮರ್ಥನಿಯ ಎಂದ ಗೌಡರು, ಈವರೆಗೆ ಸಂಪೂರ್ಣ ತನಿಖೆ ನಡೆದರೆ ಕೆಲ ಹಿರಿಯ ಧುರೀಣರ ಬಂಡವಾಳ ಬೆಳಕಿಗೆ ಬರುತ್ತದೆ. ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಇವರಿಂದ ದೇಶದಲ್ಲಿ ಭ್ರಷ್ಟಾಚಾರ ನಿಗ್ರಹ ಅಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಳೆದ ಕೆಲ ವರ್ಷಗಳಿಂದ ದೇಶದ ಅತಿ ಮುಖ್ಯವಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸೇರಿದಂತೆ ಪತ್ರಿಕಾ ರಂಗವೂ ತನ್ನ ಮೌಲ್ಯಗಳನ್ನು ಕಳೆದುಕೊಂಡಿದೆ. ಆದ್ದರಿಂದ ದೇಶದಲ್ಲಿ ಹಲವು ಸಮಸ್ಯೆಗಳು ತಲೆದೋರಿದ್ದು, ಜನರು ಸಂಕಷ್ಟಗಳಿಗೆ ಸಿಲುಕುವಂತಾಗಿದೆ ಎಂದು ಹೇಳಿದರು.