ತೀರ್ಪಿನಿಂದ ಉತ್ತರ ಕರ್ನಾಟಕಕ್ಕೆ ಅನುಕೂಲವಾಗಲಿದೆ: ಪ್ರಕಾಶ್
ಹೂವಿನಹಡಗಲಿ, ಶನಿವಾರ, 1 ಜನವರಿ 2011( 18:09 IST )
ಕೃಷ್ಣಾ ಜಲ ನ್ಯಾಯಾಧೀಕರಣದ ತೀರ್ಪಿನಿಂದ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಎಂ.ಪಿ.ಪ್ರಕಾಶ್ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ಆಲಮಟ್ಟಿ ಅಣೆಕಟ್ಟನ್ನು 519.6 ಮೀ.ಗೆ ಎತ್ತರಿಸಿ, ನೀರನ್ನು ವಿದ್ಯುತ್ ಉತ್ಪಾದನೆಗೆ ವಿನಿಯೋಗಿಸುವುದಾಗಿ ಹೇಳಿದರೂ ಮಹಾರಾಷ್ಟ್ರ ಸರಕಾರ ಅಲ್ಲಿನ ಸಾಂಗ್ಲಿ ಹಾಗೂ ಇತರೆ ಪ್ರದೇಶಗಳು ಮುಳುಗುವುದಾಗಿ ಕ್ಯಾತೆ ತೆಗೆದಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಕರಣ ಪ್ರಸ್ತುತ ತೀರ್ಪಿನಲ್ಲಿ ಅಣೆಕಟ್ಟು ಎತ್ತರವನ್ನು 524 ಮೀ.ವರೆಗೂ ಎತ್ತರಿಸಲು ಅನುಮತಿ ನೀಡಿರುವುದು ಸಮಾಧಾನದ ಸಂಗತಿ ಎಂದರು.
ನ್ಯಾಯಾಧೀಕರಣದ ತೀರ್ಪನ್ನು ಸಕಾಲದಲ್ಲಿ ಬಳಸಿಕೊಳ್ಳಲು ಸರಕಾರದಲ್ಲಿ ಸಂಪನ್ಮೂಲ ಹಾಗೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿದೆ. ಅದರಲ್ಲೂ ತೀರ್ಪು ಉತ್ತರ ಕರ್ನಾಟಕಕ್ಕೆ ಹೆಚ್ಚು ಲಾಭಕಾರಿಯಾಗಿರುವುದರಿಂದ ಉದ್ದೇಶಪೂರ್ವಕವಾಗಿ ವಿಫಲಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ಸರಕಾರ ಸಾಲ ಮಾಡಿಯಾದರೂ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಹೇಳಿರುವ ಮುಖ್ಯಮಂತ್ರಿಯ ಮಾತು ಉತ್ತರ ಕುಮಾರನ ಪೌರುಷದಂತಿದೆ. ಸಾಲ ಮಾಡುವಾಗ ರಿಸರ್ವ್ ಬ್ಯಾಂಕ್, ಯೋಜನಾ ಆಯೋಗ ಹಾಗೂ ಇತರೆ ಸಂಸ್ಥೆಗಳ ಪರವಾನಗಿ ಪಡೆಯಬೇಕಿದೆ ಎಂದರು.
ಸರಕಾರಿ ಅಧಿಕಾರಿಗಳು ಆಳುವ ಪಕ್ಷದ ಗುಲಾಮರಾಗಿದ್ದಾರೆ. ಅಧಿಕಾರಿಯೊಬ್ಬರು ಮತದಾನ ನಡೆಯುವ ಸ್ಥಳದಲ್ಲೆ ಯಾವ ಅಧಿಕಾರವೂ ಇಲ್ಲದೆ ಮತದಾರರ ಪಟ್ಟಿಯಿಂದ ಹಲವು ಹೆಸರುಗಳನ್ನು ತೆಗೆದುಹಾಕಿ ಆಡಳಿತ ಪಕ್ಷಕ್ಕೆ ಅನುಕೂಲ ಮಾಡಿದ್ದಾರೆ. ಈ ಕುರಿತು ದಾವಣಗೆರೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.