ರಾಸಲೀಲೆ ಖ್ಯಾತಿಯ ನಿತ್ಯಾನಂದ ಸ್ವಾಮಿ ಹೊಸ ವರ್ಷದ ಸಂಭ್ರಮದ ನಡುವೆಯೇ ಆನಂದೋತ್ಸವದ ಹೆಸರಿನಲ್ಲಿ ತನ್ನ 34ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಬಾಲಿವುಡ್ ಖ್ಯಾತ ನಟಿ ಜೂಹಿ ಚಾವ್ಲಾ ಅವರು ಬಿಡದಿ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.
ಕಾಮಿಸ್ವಾಮಿ ನಿತ್ಯಾನಂದ ಇಂದು 34ನೇ ಹುಟ್ಟುಹಬ್ಬವನ್ನು ಬಿಡದಿ ಆಶ್ರಮದಲ್ಲಿ ಆನಂದೋತ್ಸವದ ಹೆಸರಿನಲ್ಲಿ ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಆಶ್ರಮದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮಗಳು ನಡೆಯಿತು.
ನಿತ್ಯಾನಂದನ ಹುಟ್ಟುಹಬ್ಬದ ದಿನದಂದು ನಟಿ ಜೂಹಿ ಚಾವ್ಲಾ ಅವರು ಕುಟುಂಬ ವರ್ಗದ ಸಮೇತ ಬಿಡದಿ ಆಶ್ರಮಕ್ಕೆ ಭೇಟಿ ನೀಡಿ, ಸ್ವಾಮೀಜಿಗೆ ಹುಟ್ಟು ಹಬ್ದದ ಶುಭಾಶಯ ಸಲ್ಲಿಸಿ, ಆಶೀರ್ವಾದ ಪಡೆದರು. ನಿತ್ಯಾನಂದನ ಹುಟ್ಟುಹಬ್ಬದ ಪ್ರಯುಕ್ತ ಇಂದು ಬೆಳಿಗ್ಗೆ ಮೆರವಣಿಗೆ ಮೂಲಕ ಆಶ್ರಮಕ್ಕೆ ಕರೆ ತಂದು ಪಾದಪೂಜೆ ನಡೆಸಲಾಯಿತು. ಜೂಹಿ ಚಾವ್ಲಾ ಕುಟುಂಬ ಕೂಡ ಪಾದಪೂಜೆ ನಡೆಸಿ ಆಶೀರ್ವಾದ ಪಡೆದಿರುವುದಾಗಿ ಆಶ್ರಮದ ಮೂಲಗಳು ತಿಳಿಸಿವೆ.
ಕಳೆದ ಎರಡು ವರ್ಷಗಳಿಂದ ಆನಂದೋತ್ಸವದ ಹೆಸರಿನಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ನಿತ್ಯಾನಂದ ಸ್ವಾಮಿ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದ ಘಟಾನುಘಟಿ ರಾಜಕಾರಣಿಗಳನ್ನು ಆಹ್ವಾನಿಸಿ ಅದ್ದೂರಿಯಾಗಿ ಕಾರ್ಯಕ್ರಮ ನೆರವೇರಿಸುತ್ತಿದ್ದ. ಆದರೆ ರಾಸಲೀಲೆ ಪ್ರಕರಣ ಸ್ಫೋಟಗೊಂಡ ಪರಿಣಾಮ ನಿತ್ಯಾನಂದನ ವರ್ಚಸ್ಸು ಇಳಿಮುಖವಾಗಿರುವುದು ಈ ವರ್ಷದ ಹುಟ್ಟುಹಬ್ಬದಲ್ಲಿ ಸಾಬೀತಾಗಿದೆ.
PTI
ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ನಟ ವಿಷ್ಣುವರ್ಧನ್, ಮಾಳವಿಕಾ-ಅವಿನಾಶ್ ದಂಪತಿಗಳು, ತಾರಾ ಹೀಗೆ ತಾರೆಯರು ಸೇರಿದಂತೆ ರಾಜಕಾರಣಿಗಳು ನಿತ್ಯಾನಂದ ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ನಟಿ ಜೂಹಿ ಚಾವ್ಲಾ ಹೊರತು ಪಡಿಸಿ, ಗಣ್ಯ ವ್ಯಕ್ತಿಗಳ್ಯಾರು ಭಾಗವಹಿಸಿಲ್ಲ. ನಿತ್ಯಾನಂದನ ಆಪ್ತರನ್ನು ಹೊರತುಪಡಿಸಿದರೆ, ಸ್ಥಳೀಯರು ಕೂಡ ನಿತ್ಯನ ಆನಂದೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.
ರಂಜಿತಾಳಿಂದಲೂ ಪಾದಪೂಜೆ ?: ರಾಸಲೀಲೆ ಪ್ರಕರಣದ ಪ್ರಮುಖ ಬಿಂದುವಾಗಿರುವ ನಟಿ ರಂಜಿತಾ ಶುಕ್ರವಾರವಷ್ಟೇ ನಗರದಲ್ಲಿ ದಿಢೀರ್ ಪ್ರತ್ಯಕ್ಷವಾಗಿ ಪತ್ರಿಕಾಗೋಷ್ಠಿ ನಡೆಸಿ ತನ್ನ ಮೇಲಿನ ಆರೋಪ ಸುಳ್ಳಿನ ಕಂತೆ ಎಂದ್ದಿದ್ದರು. ಅಲ್ಲದೇ ತಾನು ಎಂದೆಂದಿಗೂ ನಿತ್ಯಾನಂದನ ಭಕ್ತೆಯಾಗಿಯೇ ಇರುವುದಾಗಿ ತಿಳಿಸಿ, ಅವಕಾಶ ಸಿಕ್ಕರೆ ಮತ್ತೆ ನಿತ್ಯಾನಂದ ಸ್ವಾಮಿಯನ್ನು ಭೇಟಿಯಾಗಿ ಆಶೀರ್ವಾದ ಪಡೆಯುವುದಾಗಿ ತಿಳಿಸಿದ್ದರು.
ಆ ನಿಟ್ಟಿನಲ್ಲಿ ಇಂದು ನಿತ್ಯಾನಂದನ 34ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಟಿ ರಂಜಿತಾ ಅವರು ಖುದ್ದಾಗಿ ಬಿಡದಿ ಆಶ್ರಮಕ್ಕೆ ತೆರಳಿ ಪಾದಪೂಜೆ ನಡೆಸಲಿದ್ದಾರೆ ಎಂದು ಆಶ್ರಮದ ಮೂಲಗಳು ತಿಳಿಸಿವೆ. ಆದರೆ ಸಂಜೆ ತನಕ ರಂಜಿತಾ ಪತ್ತೆ ಇಲ್ಲವಾಗಿತ್ತು. ಇನ್ನು ಕೆಲವು ಮಾಹಿತಿ ಪ್ರಕಾರ, ರಂಜಿತಾ ರಹಸ್ಯವಾಗಿ ಆಶ್ರಮಕ್ಕೆ ಭೇಟಿ ನೀಡಿ ಪಾದಪೂಜೆ ನಡೆಸಿ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.