ತೆರಿಗೆ ವಂಚನೆ, ಅಕ್ರಮ ಗಣಿಗಾರಿಕೆಯಂತಹ ವ್ಯವಹಾರಗಳಲ್ಲಿ ಭಾಗಿಯಾಗಿರುವ ಕಳಂಕಿತ ಸಚಿವರಾದ ರೆಡ್ಡಿ ಸಹೋದರರನ್ನು ಸಂಪುಟದಿಂದ ಹೊರಗಿಡುವಂತೆ ರಾಜ್ಯಪಾಲ ಎಚ್.ಆರ್.ಭಾರಧ್ವಾಜ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯಪಾಲ ಭಾರಧ್ವಾಜ್ ನಡುವಣ ಶೀತಲ ಸಮರ, ಶುಕ್ರವಾರದಂದು ಸಿಎಂ ನೀಡಿದ ಭೇಟಿಯಿಂದಾಗಿ ಅಂತ್ಯಗೊಂಡಿದೆ.
ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ಅರುಣ್ ಜೇಟ್ಲಿ ರಾಯಭಾರದ ಫಲಸ್ವರೂಪವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿ ಮಾಡಿದರು.ಈ ವೇಳೆ ರಾಜ್ಯಾಪಲರು ಕಳಂಕಿತ ರೆಡ್ಡಿ ಸಹೋದರರನ್ನು ಸಚಿವ ಸಂಪುಟದಿಂದ ಹೊರಗಿಡುವಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ರೆಡ್ಡಿ ಸಹೋದರರು ಹಲವಾರು ವಿವಾದಗಳಲ್ಲಿ ಸಿಲುಕಿದ್ದಾರೆ.ಅಕ್ರಮ ಗಣಿಗಾರಿಕೆ,ತೆರಿಗೆ ವಂಚನೆ,ಲಾಭದಾಯಕ ಹುದ್ದೆ ಸೇರಿದಂತೆ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಅವರನ್ನು ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ರಾಜ್ಯಪಾಲರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಿವಿಮಾತು ಹೇಳಿದ್ದಾರೆ.