ಅಧಿವೇಶನಕ್ಕೆ ವಿಘ್ನ: ಏಟಿಗೆ ತಿರುಗೇಟು ನೀಡಲು ಬಿಜೆಪಿ ತಂತ್ರ
ಬೆಂಗಳೂರು, ಭಾನುವಾರ, 2 ಜನವರಿ 2011( 16:08 IST )
ಉಭಯ ಸದನಗಳ ಜಂಟಿ ಅಧಿವೇಶನ ಜನೆವರಿ 6 ರಂದು ಆರಂಭವಾಗಲಿದ್ದು,ವಿರೋಧ ಪಕ್ಷಗಳ ಸವಾಲಿನ ಹಿನ್ನೆಲೆಯಲ್ಲಿ ಕಲಾಪ ಸುಗಮವಾಗಿ ನಡೆಯುವುದು ಅನುಮಾನವಾಗಿದೆ.
ಭ್ರಷ್ಟಾಚಾರ, ಭಊ ಹಗರಣ, ಸ್ವಜನ ಪಕ್ಷಪಾತ, ಡಿ.ನೋಟಿಫಿಕೇಶನ್ ಸೇರಿದಂತೆ ಹಲವು ಗಂಭೀರ ಆಪಾದನೆ ಎದುರಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರಿಂದ, ಕಲಾಪ ಸುಗಮವಾಗಿ ನಡೆಯುವುದೇ ಎನ್ನುವ ಪ್ರಶ್ನೆ ಎದುರಾಗಿದೆ.
ಜೆಡಿಎಸ್ ಪಕ್ಷದ ನಿಲುವಿಗೆ ಕಾಂಗ್ರೆಸ್ ಪಕ್ಷ ಕೂಡಾ ಬೆಂಬಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲವಾದ್ದರಿಂದ, ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಜನೆವರಿ 4 ರಂದು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಒಂದು ವೇಳೆ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದಲ್ಲಿ ವಿರೋಧ ಪಕ್ಷಗಳ ನೈತಿಕ ಬಲ ಕುಸಿಯಲಿದೆ.ಒಂದು ವೇಳೆ ಹೆಚ್ಚು ಸ್ಥಾನಗಳಿಸಲು ವಿಫಲವಾದಲ್ಲಿ ಬಿಜೆಪಿ ಭಾರಿ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ.