ಹಂಸರಾಜ್ ಭಾರದ್ವಾಜ್ ಅವರು ಪಾಕಿಸ್ತಾಸ್ತಾನದ ರಾಜ್ಯಪಾಲರಂತೆ ವರ್ತಿಸುತ್ತಿದ್ದಾರೆ ಎಂಬ ವಿಹಿಂಪ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ, ತೊಗಾಡಿಯಾಗೆ ಕೋಮುವಾದದ ಕಾಮಾಲೆ ರೋಗವಿದೆ ಎಂದು ತಿರುಗೇಟು ನೀಡಿದ್ದಾರೆ.
ಕೋಮುವಾದಿಯಾಗಿರುವ ತೊಗಾಡಿಯಾ ಜಗತ್ತನ್ನು ಕಾಮಾಲೆ ಕಣ್ಣಿನಿಂದ ನೋಡುತ್ತಿದ್ದಾರೆ. ರಾಜ್ಯದ ಜನರು ತೊಗಾಡಿಯಾ ಹೇಳಿಕೆಯನ್ನು ಕಣ್ಮುಚ್ಚಿಕೊಂಡು ನಂಬುವಷ್ಟು ದಡ್ಡರಲ್ಲ. ಪ್ರತಿಯೊಂದನ್ನು ವಿಶ್ಲೇಷಿಸುವ ಪ್ರಬುದ್ಧತೆ ಅವರಲ್ಲಿದೆ ಎಂದರು.
ತೊಗಾಡಿಯಾ ಅವರ ಕೋಮುವಾದದ ಕಾಮಾಲೆ ಕಣ್ಣಿಗೆ ರಾಜ್ಯದ ಎಲ್ಲಾ ಜನರು ಪಾಕಿಸ್ತಾನಿಗಳಂತೆ ಕಾಣಿಸಿದರೆ ಅಚ್ಚರಿಯೇನಿಲ್ಲ ಎಂದು ಮೊಯ್ಲಿ ವ್ಯಂಗ್ಯವಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಭವನಕ್ಕೆ ಭೇಟಿ ನೀಡುವುದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಔಪಚಾರಿಕ ಭೇಟಿಗೆ ಅನವಶ್ಯಕವಾಗಿ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ. ರಾಜ್ಯಪಾಲರು ರಾಜ್ಯದ ಸಂವಿಧಾನ ಮುಖ್ಯಸ್ಥರು. ಕೇಂದ್ರ ಸಚಿವನಾಗಿ ಅವರನ್ನು ಭೇಟಿ ಮಾಡುವುದು ನನ್ನ ಕರ್ತವ್ಯ ಎಂದರು.
ಮುಖ್ಯಮಂತ್ರಿಗಳಿಗೆ ಒಂದು ಬಗೆಯ ಭ್ರಮೆ ಆವರಿಸಿದೆ. ಕಂಸನಿಗೆ ಎಲ್ಲಿ ನೋಡಿದರೂ ಕೃಷ್ಣನೇ ಕಾಣುವಂತೆ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು, ವಿರೋಧ ಪಕ್ಷದ ನಾಯಕರು ಇಲ್ಲವೇ ಕೇಂದ್ರ ಸಚಿವರು ಕಾಣಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.