ರಾಸಲೀಲೆ ಪ್ರಕರಣದ ಸಿಡಿ ಬರೇ ಬೋಗಸ್ ಅದರಲ್ಲಿ ಇರುವುದು ತಾನಲ್ಲ ಎಂದು ನಟಿ ರಂಜಿತಾ ಸ್ಪಷ್ಟನೆ ನೀಡಿದ್ದರೆ, ಮತ್ತೊಂದೆಡೆ ರಾಸಲೀಲೆ ಸಿಡಿಯಲ್ಲಿರುವುದು ರಂಜಿತಾ ಹಾಗೂ ನಿತ್ಯಾನಂದನೇ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಖಚಿತಪಡಿಸಿದೆ ಎಂದು ಹೆಸರು ಹೇಳಲು ಇಚ್ಚಿಸದ ಸಿಐಡಿ ಅಧಿಕಾರಿಯೊಬ್ಬರು ಮಾಹಿತಿ ಬಹಿರಂಗಪಡಿಸಿದ್ದಾರೆ.
ಹೈದರಾಬಾದ್ ಮತ್ತು ಚಂಡೀಗಡದಲ್ಲಿ ಇರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ನಿತ್ಯಾ ರಾಸಲೀಲೆ ಸಿಡಿಯನ್ನು ಸಿಐಡಿ ಪರೀಕ್ಷೆಗಾಗಿ ಕಳುಹಿಸಿತ್ತು. ಸಿಡಿಯಲ್ಲಿರುವುದು ನಿತ್ಯಾನಂದ ಹಾಗೂ ರಂಜಿತಾ ವಿನಃ ಬೇರಾರು ಅಲ್ಲ ಎಂದು ವರದಿ ಹೇಳಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ವರದಿಯಲ್ಲಿ ಏನಾದರು ದೋಷ ಇದ್ದಲ್ಲಿ, ವಿದೇಶಿ ಪ್ರಯೋಗಾಲಯಗಳಲ್ಲೂ ಸಿಡಿಯ ಅಸಲಿತನದ ಬಗ್ಗೆ ಪರೀಕ್ಷೆ ನಡೆಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಜೂನ್ 21ರಂದು ರಂಜಿತಾ ಅವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. ಆ ಸಂದರ್ಭದಲ್ಲಿ ಲೆನಿನ್ ಬಗ್ಗೆ ಒಂದೇ ಒಂದು ಆರೋಪ ಮಾಡದ ಅವರು, ಇತ್ತೀಚೆಗಷ್ಟೇ ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಲೆನಿನ್ ತಮ್ಮ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದರು ಎಂದು ಆರೋಪಿಸಿದ್ದರು. ಈಗ ಏಕೆ ಇಂಥ ಆರೋಪ ಮಾಡಿದ್ದಾರೋ ತಿಳಿಯುತ್ತಿಲ್ಲ ಎಂದು ಅಧಿಕಾರಿ ಪ್ರಶ್ನಿಸಿದ್ದಾರೆ.