ಈ ಬಾರಿ ಅಧಿವೇಶನದಲ್ಲಿ ಸದನ ನಡೆಯುವುದಕ್ಕೆ ಬಿಡುವುದಿಲ್ಲ ಎಂದು ಹೇಳುವ ಮೂಲಕ ಪ್ರತಿಪಕ್ಷದವರು ಪಲಾಯನವಾದ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸರಕಾರ ಮತ್ತು ಸಿಎಂ ವಿರುದ್ಧ ಆರೋಪ ಮಾಡುತ್ತಿರುವ ಪ್ರತಿಪಕ್ಷದ ಮುಖಂಡರು ಸರಿಯಾದ ದಾಖಲೆಗಳನ್ನು ಸದನದ ಮುಂದಿಟ್ಟು ಚರ್ಚೆಗೆ ಅವಕಾಶ ನೀಡಲಿ. ಸದನ ನಡೆಯುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳುವ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಅಗೌರವ ಸೂಚಿಸಲು ಹೊರಟಿದ್ದಾರೆ ಎಂದು ಆಪಾದಿಸಿದರು.
ಪ್ರತಿಪಕ್ಷಗಳು ಮಾಡುವ ಆರೋಪಕ್ಕೆ ಸದನದಲ್ಲಿ ದಾಖಲೆಗಳನ್ನು ಹಾಜರುಪಡಿಸಲಿ. ಅದಕ್ಕೆ ಸರಿಯಾದ ಉತ್ತರ ನೀಡುತ್ತೇವೆ. ಸತ್ಯಾಸತ್ಯತೆಯನ್ನು ಜನರೇ ನಿರ್ಧರಿಸುತ್ತಾರೆ. ಸದನದಲ್ಲಿ ಚರ್ಚೆ ಮಾಡಲು ಅವಕಾಶ ಸಿಕ್ಕಿರುವಾಗ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಹೊರಗೆ ಹೇಳಿಕೆ ನೀಡುವುದು, ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದರು.
ರಾಜ್ಯಪಾಲರಿಗೆ ಜಂಟಿ ಅಧಿವೇಶನದಲ್ಲಿ ಮಾತನಾಡಬೇಡಿ ಎಂದು ಅರ್ಜಿ ಸಲ್ಲಿಸುವುದು ರಾಜಕೀಯ ಪಕ್ಷಗಳಿಗೆ ಶೋಭೆ ತರುವಂತದ್ದಲ್ಲ. ಇಂತಹ ಚಟುವಟಿಕೆ ಸರಿಯಾದುದೇ ಎಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಮತ್ತು ಪ್ರಧಾನಿಯಾಗಿದ್ದ ದೇವೇಗೌಡರೇ ಹೇಳಬೇಕು. ಹೀಗಾದಲ್ಲಿ ಪ್ರಜಾತಂತ್ರ ವ್ಯವಸ್ಥೆ, ಸಂವಿಧಾನ ಏಕೆ ಬೇಕು ಎಂದು ಪ್ರಶ್ನಿಸಿದರು.