ಸಿಎಂ ವಿರುದ್ಧ ಮೊಕದ್ದಮೆಗೆ ಗವರ್ನರ್ ಅನುಮತಿ ಕೊಡ್ಲಿ: ಪೂಜಾರಿ
ಮಂಗಳೂರು, ಮಂಗಳವಾರ, 4 ಜನವರಿ 2011( 20:21 IST )
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭೂ ಹಗರಣಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕೆಂದು ಕೋರಿರುವ ಇಬ್ಬರು ವಕೀಲರ ಮನವಿಯನ್ನು ಪುರಸ್ಕರಿಸಬೇಕೆಂದು ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18 ಆರೋಪಗಳನ್ನು ಪಟ್ಟಿ ಮಾಡಿರುವ ಇಬ್ಬರು ನ್ಯಾಯವಾದಿಗಳು ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ರಾಜ್ಯಪಾಲರ ಅನುಮತಿ ಕೇಳಿದ್ದು, ಪರಿಶೀಲಿಸವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ. ಹಿಂದೊಮ್ಮೆ ಡಿನೋಟಿಫಿಕೇಶನ್ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪಂಚ ನ್ಯಾಯಾಧೀಶರ ಪೀಠ, ಅನುಮತಿ ನೀಡಬಹುದು ಎಂದು ಆದೇಶ ನೀಡಿತ್ತು. ಮುಖ್ಯಮಂತ್ರಿ ವಿರುದ್ಧ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಾಗಿ ತನಿಖೆ ನಡೆಯಲಿ, ಕೋರ್ಟ್ ಖಂಡಿತಾ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಆದರ್ಶ ಸೊಸೈಟಿ ಹಗರಣ, 2ಜಿ ಹಗರಣದಲ್ಲಿ ಕಾಂಗ್ರೆಸ್ ಕೈಗೊಂಡ ನಿರ್ಧಾರವನ್ನು ಯಡಿಯೂರಪ್ಪ ವಿಚಾರದಲ್ಲಿ ಬಿಜೆಪಿ ಅಳವಡಿಸಿಕೊಳ್ಳಲಿ. ಮುಖ್ಯಮಂತ್ರಿ ಭೂ ಹಗರಣ 50 ಸಾವಿರ ಕೋಟಿ ದಾಟಿದೆ, 1 ಲಕ್ಷ ಕೋಟಿ ರೂ. ದಾಟಬಹುದು ಎಂಬ ಲೆಕ್ಕಾಚಾರವೂ ಇದೆ. 2ಜಿ ಹಗರಣಕ್ಕಿಂತಲೂ ಇದು ದೊಡ್ಡದು. ಬಿಜೆಪಿ ನಾಯಕರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಹಗರಣದ ದಾಖಲೆಗಳನ್ನು ಪೊಲೀಸರಿಗೆ ಒಪ್ಪಿಸಲಿ, ಸಿಬಿಐ ತನಿಖೆಯಾಗಲಿ. 50 ರೂ. ಲಂಚ ಪಡೆದ ಪೊಲೀಸ್, ಜೈಲರ್‌ಗಳನ್ನು ಬಂಧಿಸುತ್ತಾರೆ. ಆದರೆ ಕೋಟಿಗಟ್ಟಲೆ ಕೊಳ್ಳೆ ಹೊಡೆವ ಖದೀಮರನ್ನು ಏಕೆ ಬಿಡುತ್ತೀರಿ ಎಂದು ಪ್ರಶ್ನಿಸಿದರು.
ಉಪಯೋಗ ಇಲ್ಲದ ಜಾನುವಾರುಗಳನ್ನು ಕೊಲ್ಲಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಗುಜರಾತ್, ಮಧ್ಯಪ್ರದೇಶದಲ್ಲಿ ಇಲ್ಲದ ಗೋಹತ್ಯೆ ನಿಷೇಧ ಇಲ್ಲೇಕೆ? ಈ ಕಾಯಿದೆ ಜಾರಿಗೆ ಬಂದರೆ ಗಂಡಾಂತರ ಉಂಟಾಗಲಿದೆ ಎಂದರು.