ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಳ್ಳಾರಿಯಲ್ಲಿ ಮತ್ತೆ ಆಪರೇಶನ್ ಕಮಲ; 'ಕೈ' ಸದಸ್ಯೆ ಬಿಜೆಪಿಗೆ (BJP | Congress | JDS | Parameshwar | KPCC | Operation kamala)
Bookmark and Share Feedback Print
 
ಬಳ್ಳಾರಿ ಜಿಲ್ಲೆಯಲ್ಲಿ ಗಣಿಧಣಿಗಳು ಮತ್ತೆ ಆಪರೇಶನ್ ಕಮಲಕ್ಕೆ ಮುಂದಾಗಿದ್ದು, ಕಾಂಗ್ರೆಸ್ ಸದಸ್ಯೆ ನಾಗರತ್ನಮ್ಮ ಅವರನ್ನು ಬಿಜೆಪಿಗೆ ಸೆಳೆದುಕೊಳ್ಳುವ ಮೂಲಕ ಜಿಲ್ಲಾ ಪಂಚಾಯ್ತಿಯಲ್ಲಿ ತಮ್ಮ ಅಧಿಪತ್ಯವನ್ನು ಸಾಬೀತುಪಡಿಸಿಕೊಳ್ಳಲು ಸಜ್ಜಾಗಿದ್ದಾರೆ.

ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಫಲಿತಾಂಶದಲ್ಲಿ ಒಟ್ಟು 36 ಸ್ಥಾನಗಳ ಪೈಕಿ ಬಿಜೆಪಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. 17 ಸ್ಥಾನ ಕಾಂಗ್ರೆಸ್‌ಗೆ, 1 ಸ್ಥಾನ ಜೆಡಿಎಸ್ ತೆಕ್ಕೆಗೆ ಹೋಗಿತ್ತು. ಇದರಿಂದಾಗಿ ಯಾವ ಪಕ್ಷಕ್ಕೂ ಪೂರ್ಣ ಬಹುಮತ ಬಾರದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.

ಆದರೆ ಜಿಲ್ಲಾ ಪಂಚಾಯಿತಿ ಅಧಿಕಾರದ ಗದ್ದುಗೆ ಹಿಡಿಯಲು ಆಪರೇಶನ್ ಕಮಲ ಒಂದೇ ದಾರಿ ಎಂದು ಮನಗಂಡ ಸಚಿವ ಜನಾರ್ದನ ರೆಡ್ಡಿ, ಶ್ರೀರಾಮುಲು ಅವರು ಸಿರಗುಪ್ಪ ತಾಲೂಕಿನ ಹಳೇಕೋಟೆ ಜಿಲ್ಲಾ ಪಂಚಾಯ್ತಿ ಕಾಂಗ್ರೆಸ್ ಸದಸ್ಯೆ ನಾಗರತ್ನಮ್ಮ ಅವರನ್ನು ಬಿಜೆಪಿ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆ ನಿಟ್ಟಿನಲ್ಲಿ ಬಿಜೆಪಿ ಸಂಖ್ಯಾ ಬಲ 19ಕ್ಕೆ ಏರಿದ್ದು, ಅಧಿಕಾರದ ಗದ್ದುಗೆ ಏರಲು ಹಾದಿ ಸುಗಮವಾದಂತಾಗಿದೆ.

ನಾಗರತ್ನಮ್ಮ ಅವರು ಸಚಿವರಾದ ಜನಾರ್ದನ ರೆಡ್ಡಿ, ಶ್ರೀರಾಮುಲು, ಸಂಸದೆ ಜೆ.ಶಾಂತಾ, ಶಾಸಕ ಸುರೇಶ್ ಬಾಬು ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಅಲ್ಲದೇ ಸಂಜೆಯೊಳಗೆ ಇನ್ನಷ್ಟು ಸದಸ್ಯರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಜನಾರ್ದನ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದರು.

ಏತನ್ಮಧ್ಯೆ, ರೆಡ್ಡಿ ಸಹೋದರರು ಜೆಡಿಎಸ್ ಸದಸ್ಯೆ ಸರಸ್ವತಿ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವುದಾಗಿ ವರದಿಯಾಗಿತ್ತು. ಆದರೆ ಜೆಡಿಎಸ್ ಸದಸ್ಯೆ ಸರಸ್ವತಿ ಬಿಜೆಪಿಗೆ ಬೆಂಬಲ ನೀಡಿಲ್ಲ ಎಂದು ಜೆಡಿಎಸ್ ಸ್ಪಷ್ಟಪಡಿಸಿತ್ತು.

ಇದು ಪ್ರಜಾಪ್ರಭುತ್ವದ ಕಗ್ಗೊಲೆ-ಕಾಂಗ್ರೆಸ್
ಜಿಲ್ಲಾ ಪಂಚಾಯ್ತಿಯಲ್ಲಿಯೂ ಬಿಜೆಪಿ ಆಪರೇಶನ್ ಕಮಲ ಮುಂದುವರಿಸಿ ಕಾಂಗ್ರೆಸ್ ಸದಸ್ಯೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಿಡಿಕಾರಿರುವ ಅವರು, ಬಿಜೆಪಿ ವಾಮಮಾರ್ಗ ಅನುಸರಿಸುವುದರಲ್ಲಿಯೇ ಕಾಲ ಕಳೆಯುತ್ತಿದೆ ಎಂದರು. ಅಲ್ಲದೇ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಹೈಕಮಾಂಡ್ ಹಸಿರು ನಿಶಾನೆ ನೀಡಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ