ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಭ್ರಷ್ಟಾಚಾರದ ಸರಕಾರಕ್ಕೆ ಸಾಗರದ ಜನ ತಕ್ಕ ಉತ್ತರ ನೀಡಿದ್ದಾರೆ ಎಂದಿರುವ ಅನರ್ಹ ಶಾಸಕ ಬೇಳೂರು ಗೋಪಾಲಕೃಷ್ಣ, ಬಿಜೆಪಿ ಸರ್ವನಾಶಕ್ಕೆ ಶಿಕಾರಿಪುರದಿಂದಲೇ ಯಾತ್ರೆ ಆರಂಭಿಸುವುದಾಗಿ ಘೋಷಿಸಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇನ್ನು ನೀವು ಸಾಗರ ತಾಲೂಕಿಗೆ ಕಾಲಿಡುವುದೇ ಬೇಡ ಎಂಬ ಸಂದೇಶವನ್ನು ಮತದಾರರು ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ. ಅಷ್ಟೇ ಅಲ್ಲ ಜನ ಬಿಜೆಪಿಯನ್ನು ತಿರಸ್ಕರಿಸಿರುವುದು ಸ್ಪಷ್ಟವಾಗಿದೆ ಎಂದರು.
ಅಪ್ಪ-ಮಕ್ಕಳು ಮೊದಲು ಭ್ರಷ್ಟರಾಗಿರಲಿಲ್ಲ. ಆದರೆ ಇದೀಗ ಎಲ್ಲರಿಗಿಂತ ದೊಡ್ಡ ಭ್ರಷ್ಟಚಾರ ಎಸಗುತ್ತಿದ್ದಾರೆ. ಹಾಗಾಗಿ ಬಿಜೆಪಿ ನಾಶಕ್ಕೆ ಶಿಕಾರಿಪುರದಿಂದಲೇ ಯಾತ್ರೆ ಆರಂಭಿಸುವುದಾಗಿ ಹೇಳಿದರು.
ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಭೂಮಿ ಗುಳುಂ ಮಾಡಿ ಆಯ್ತು, ಇನ್ನು ರಾಷ್ಟ್ರರಾಜಕಾರಣಕ್ಕೆ ಸೇರಿ ಅಲ್ಲಿಯೂ ಗುಳುಂ ಮಾಡಲು ಹೊರಟಿದ್ದಾರೆ ಎಂದು ಬೇಳೂರು ವ್ಯಂಗ್ಯವಾಡಿದ್ದಾರೆ. ಅಪ್ಪ-ಮಗನಿಗೆ ತಾಕತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ಮಂಗಳವಾರ ಹೊರಬಿದ್ದ ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿ ಫಲಿತಾಂಶದಲ್ಲಿ 31 ಸದಸ್ಯಬಲದ ಜಿ.ಪಂನಲ್ಲಿ ಬಿಜೆಪಿ 16, ಕಾಂಗ್ರೆಸ್ 13, ಜೆಡಿಎಸ್ 2 ಸ್ಥಾನ ಗೆದ್ದಿತ್ತು. ಆದರೆ ಬೇಳೂರು ಪ್ರತಿನಿಧಿಸುವ ಸಾಗರ ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ 12 ಸ್ಥಾನ, ಪಕ್ಷೇತರರು 2 ಗೆಲ್ಲುವ ಮೂಲಕ ಬಿಜೆಪಿ ಒಂದೇ ಒಂದು ಸ್ಥಾನ ಪಡೆಯದೆ ಶೂನ್ಯ ಸಂಪಾದನೆ ಮಾಡಿದೆ.
ಅನರ್ಹ ಶಾಸಕ ಬೇಳೂರು ಗೋಪಾಲ ಕೃಷ್ಣ ಈ ಬಾರಿಯ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಡ್ಡು ಹೊಡೆದು ಕಾಂಗ್ರೆಸ್ ಜತೆ ಕೈ ಜೋಡಿಸಿದ್ದರು. ಅದರ ಪರಿಣಾಮ ಬಿಜೆಪಿಗೆ ತಟ್ಟಿರುವುದು ಫಲಿತಾಂಶದಲ್ಲಿ ಸ್ಪಷ್ಟವಾಗಿದೆ.