ಚುನಾವಣೆಯಲ್ಲಿ ಬಾಜಿ ಕಟ್ಟುವುದು ಸಾಮಾನ್ಯ, ಆದರೆ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ತಂದೆ ಸೋತಿದ್ದಕ್ಕೆ ಬೇಸರಗೊಂಡ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ನಡೆದಿದೆ.
ಈರಮ್ಮ ಪರಮೇಶಪ್ಪ ಪೂಜಾರ (22) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆಯ ತಂದೆ ಪರಮೇಶಪ್ಪ ಪೂಜಾರ ಹಾವೇರಿ ತಾಲೂಕಿನ ಕನವಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಇದರಿಂದ ಬೇಸರಗೊಂಡ ಮಗಳು ಮಂಗಳವಾರ ಸಂಜೆ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದಳು.
ಕೂಡಲೇ ಈಕೆಯನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ಸಾವನ್ನಪ್ಪಿದ್ದಾಳೆ. ಆದರೆ ಈ ಕುರಿತಂತೆ ಠಾಣೆಯಲ್ಲಿ ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ಗ್ರಾಮೀಣ ಠಾಣೆಯ ಅಧಿಕಾರಿ ಪಂಪಾವತಿ ತಿಳಿಸಿದ್ದಾರೆ.