ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್-ದಳ ಗಲಾಟೆ: ಸದನದಿಂದ ಹೊರಹೋದ ರಾಜ್ಯಪಾಲರು (Vidhana Sabha | Karnataka Assembly Winter Session | Congress | BJP | Governor Speech)
Bookmark and Share Feedback Print
 
ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭ ದಿನವಾದ ಗುರುವಾರ, ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲು ಆರಂಭಿಸುತ್ತಿರುವಂತೆಯೇ, ಸಿದ್ದರಾಮಯ್ಯ ನೇತೃತ್ವದ ಪ್ರತಿಪಕ್ಷಗಳು ಕೂಗಾಟ, ಕಿರುಚಾಟ, ಗದ್ದಲವೆಬ್ಬಿಸಿದ ಪರಿಣಾಮ, ರಾಜ್ಯಪಾಲರೇ ಸದನದಿಂದ ಹೊರನಡೆದ ಪ್ರಸಂಗಕ್ಕೆ ಕರ್ನಾಟಕ ವಿಧಾನಸಭೆ ಸಾಕ್ಷಿಯಾಯಿತು.

ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಭಾಷಣ ಓದಲಾರಂಭಿಸಿದಂತೆಯೇ, ಭ್ರಷ್ಟಾಚಾರ ಆರೋಪ ಹೊತ್ತಿರುವ ಮುಖ್ಯಮಂತ್ರಿ ಪದತ್ಯಾಗದವರೆಗೂ ಸದನದ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಪಣ ತೊಟ್ಟಂತೆ ಕಂಡು ಬಂದ ಪ್ರತಿಪಕ್ಷಗಳು, ತೀವ್ರ ಗದ್ದಲ ಎಬ್ಬಿಸಿದವು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಂತೂ ಕೈಮುಗಿದು, ರಾಜ್ಯಪಾಲರೇ ಭಾಷಣ ಮಾಡಬೇಡಿ ಎಂದು ಹಲವಾರು ಬಾರಿ ಕೂಗಾಡುತ್ತಿದ್ದುದು ಕಂಡು ಬಂತು. ಒಟ್ಟಿನಲ್ಲಿ ಪ್ರತಿಪಕ್ಷಗಳು ಭಾಷಣಕ್ಕೆ ಅವಕಾಶವನ್ನೇ ಕೊಡದ ಕಾರಣ ರಾಜ್ಯಪಾಲರು ಸದನದಿಂದ ನಿರ್ಗಮಿಸಿದರು.

ಅವರಿಗೆ ಪ್ರತಿಪಕ್ಷದ ಕಾಂಗ್ರೆಸ್, ಜೆಡಿಎಸ್‌ಗಳು ಕೂಡ ಸಾಥ್ ನೀಡಿದವು. ಭಾಷಣವನ್ನು ಅರ್ಧಕ್ಕೇ ನಿಲ್ಲಿಸಿದ ರಾಜ್ಯಪಾಲರು ಸದನದಿಂದ ಬಿರಬಿರನೆ ನಡೆದು ಹೊರಹೋದರು. ಈಗಾಗಲೇ ಸದನದಲ್ಲಿ ಮುಖ್ಯಮಂತ್ರಿಯ ವಿರುದ್ಧ ಹೀನಾಯ ಪದ ಪ್ರಯೋಗ, ತೊಡೆ ತಟ್ಟುವುದು, ತೋಳೇರಿಸುವುದು, ಬಾಗಿಲಿಗೆ ಒದೆಯುವುದು, ಮೇಜಿನ ಮೇಲೆ ಏರಿ ಅಂಗಿ ಹರಿದುಕೊಂಡು ಕೂಗಾಡುವುದನ್ನೆಲ್ಲಾ ಕಂಡ ಕರ್ನಾಟಕದ ಪ್ರಜಾತಂತ್ರ ವ್ಯವಸ್ಥೆಯು ಗುರುವಾರ, ರಾಜ್ಯಪಾಲರೇ ಸದನದಿಂದ ಹೊರನಡೆಯಬೇಕಾದ ಪರಿಸ್ಥಿತಿ ಬಂದಿರುವುದರೊಂದಿಗೆ ಮತ್ತೊಮ್ಮೆ ತಲೆ ತಗ್ಗಿಸುವಂತಾಯಿತು.

ಇದಕ್ಕೆ ಮುನ್ನ ಸಭೆ ಸೇರಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷವು, ಕಲಾಪಕ್ಕೆ ಅಡ್ಡಿ ಮಾಡಲು ನಿರ್ಣಯ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸ್ಪೀಕರ್ ಕೆ.ಜಿ.ಬೋಪಯ್ಯ, ವಿಧಾನಪರಿಷತ್ ಸ್ಪೀಕರ್ ಡಿ.ಎಚ್.ಶಂಕರಮೂರ್ತಿ ಅವರು ರಾಜ್ಯಪಾಲರನ್ನು ಬೀಳ್ಕೊಟ್ಟರು. ನಂತರ ಸಭೆಯಲ್ಲಿ ರಾಜ್ಯಪಾಲರ ಭಾಷಣದ ಪ್ರತಿಯನ್ನ ಹಂಚಲಾಯಿತು.

ಭಾಷಣದ ಪ್ರಮುಖ ಅಂಶಗಳು;
*ಕಳೆದ ವರ್ಷ ಅನೇಕ ಸಂಘರ್ಷ ಎದುರಿಸಿದ್ದೇವೆ
*ರಾಜ್ಯ ಸರಕಾರಕ್ಕೆ ಅಭಿವೃದ್ಧಿಯೇ ಮೂಲಮಂತ್ರ,
*2011-2020 ನೀರಾವರಿ ದಶಕ ಎಂದು ಘೋಷಣೆ
*ಪ್ರವಾಹ ಸಂತ್ರಸ್ತರಿಗೆ ವಸತಿ ಸಮುಚ್ಛಯ
*2011ರ ಮಾರ್ಚ್ ಅಂತ್ಯದೊಳಗೆ ಮನೆ ಹಸ್ತಾಂತರ
*ವಾಜಪೇಯಿ ಆರೋಗ್ಯಶ್ರೀ ಯೋಜನೆ ವಿಸ್ತರಣೆ
*ಶೀಘ್ರವೇ ಕೃಷಿ, ವ್ಯಾಪಾರ ನೀತಿ ರಚನೆ
*ಪ್ರಾದೇಶಿಕ ಅಸಮತೋಲನ ನಿವಾರಿಸಲು ಯತ್ನ
*ನೀರಾವರಿ ಯೋಜನೆ ಅನುಷ್ಠಾನಕ್ಕೆ ಕಾರ್ಯ ಯೋಜನೆ

ಇದೊಂದು ಸುಳ್ಳಿನ ಕಂತೆಯ ಭಾಷಣ-ಸಿದ್ದು
ರಾಜ್ಯ ಸರಕಾರವೇ ಸಿದ್ದಪಡಿಸಿ ಕೊಟ್ಟಿರುವ ಭಾಷಣ ಸುಳ್ಳಿನ ಕಂತೆ, ಹಾಗಾಗಿ ಅದು ರಾಜ್ಯಪಾಲರ ಭಾಷಣ ಆಗಲಾರದು. ಆ ನಿಟ್ಟಿನಲ್ಲಿ ಸರಕಾರದ ಸುಳ್ಳಿನ ಕಂತೆಯ ಭಾಷಣವನ್ನು ಜಂಟಿ ಅಧಿವೇಶನದಲ್ಲಿ ಓದದಂತೆ ರಾಜ್ಯಪಾಲರಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಅಧಿವೇಶನದ ಆರಂಭಕ್ಕೂ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.

ನಿರೀಕ್ಷೆಯಂತೆಯೇ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಲು ಮುಂದಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಅಡ್ಡಿಪಡಿಸಿದ ಪರಿಣಾಮ ಭಾಷಣ ಮೊಟಕುಗೊಳಿಸಿ ರಾಜ್ಯಪಾಲರು ಅಧಿವೇಶನದಿಂದ ಹೊರನಡೆದರು.

1.76 ಲಕ್ಷ ಕೋಟಿ ರೂಪಾಯಿಯ 2ಜಿ ಹಗರಣ ಕುರಿತು ಜೆಪಿಸಿ ತನಿಖೆಗಾಗಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಪ್ರತಿಪಕ್ಷಗಳು ಸಂಸತ್ ಕಲಾಪಕ್ಕೆ ಅವಕಾಶ ಮಾಡಿಕೊಡಲಿಲ್ಲವೆಂಬುದಕ್ಕೆ ಪ್ರತಿಯಾಗಿ, ಯಡಿಯೂರಪ್ಪ ರಾಜೀನಾಮೆಗೆ ಆಗ್ರಹಿಸಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಇದೀಗ ಕಲಾಪ ನಡೆಸಲು ಅವಕಾಶ ಕೊಡುವುದು ಅನುಮಾನವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ