ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಭಾಷಣಕ್ಕೆ ವಿಪಕ್ಷಗಳು ಅಡ್ಡಿಪಡಿಸಿರುವುದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ಮತ್ತು ಜೆಡಿಎಸ್ ನಡವಳಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಪಕ್ಷಗಳ ಅಡ್ಡಿಯಿಂದಾಗಿ ಅಧಿವೇಶನ ಮುಂದೂಡಿಕೆಯ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಪಕ್ಷಗಳಿಗೆ ಸದನದಲ್ಲಿ ಚರ್ಚೆ ಮಾಡಲು ಅವಕಾಶವಿದೆ. ಆದರೆ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಯಲ್ಲಿ ಸೋತಿರುವ ವಿಪಕ್ಷಗಳು ವಾಮಮಾರ್ಗದ ಮೂಲಕ ಸರಕಾರಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿವೆ ಎಂದರು.
ಪಂಚಾಯಿತಿ ಚುನಾವಣೆಯಲ್ಲಿನ ಸೋಲು ಪ್ರತಿಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಲ್ಲದೇ ಸೋಲಿನಿಂದಲೂ ಪ್ರತಿಪಕ್ಷಗಳು ಪಾಠ ಕಲಿತಿಲ್ಲ. ಇನ್ನಾದರೂ ಪ್ರತಿಪಕ್ಷಗಳು ಕಲಾಪ ನಡೆಯಲು ಸಹಕಾರ ನೀಡಲಿ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ವಿಧಾನಮಂಡಲದ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದಿರುವ ಅವರು ಕಾಂಗ್ರೆಸ್ ಪಕ್ಷದ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಹೊಡೆತ. ಸರಕಾರದ ಸಾಧನೆಯ ಕುರಿತು ರಾಜ್ಯಪಾಲರು ಭಾಷಣ ಮಾಡುವುದು ಸಂಪ್ರದಾಯ. ಆದರೆ ವಿಪಕ್ಷಗಳು ಅನಾವಶ್ಯಕವಾಗಿ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನಡವಳಿಕೆ ರಾಜ್ಯದ ಜನತೆಯ ಹಕ್ಕಿಗೆ ಮಾಡಿದ ದ್ರೋಹ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಮೂಲೆಗುಂಪಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್, ಜೆಡಿಎಸ್ ಅನ್ನು ರಾಜ್ಯದ ಜನತೆ ತಿರಸ್ಕರಿಸಿದ್ದಾರೆ. ವಿಪಕ್ಷಗಳ ಕುತಂತ್ರವನ್ನು ಜನತೆ ಸಹಿಸೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.