ಪಂಚಾಯಿತಿ ಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪನ್ನು ಗೌರವಿಸಿ, ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತರೂಢ ಬಿಜೆಪಿ 30ರಲ್ಲಿ 12 ಜಿಪಂ, 176ರಲ್ಲಿ 68 ತಾಪಂನಲ್ಲಿ ಮಾತ್ರ ಬಹುಮತ ಪಡೆದಿದೆ. ಪ್ರತಿಪಕ್ಷಗಳಿಗೆ ಬಿಜೆಪಿಗಿಂತ ಹೆಚ್ಚು ಸ್ಥಾನಗಳು ಬಂದಿದ್ದು, ರಾಜ್ಯದ ಜನ ಸರಕಾರದ ವಿರುದ್ಧ ಇರುವುದು ಸ್ಪಷ್ಟವಾಗಿದೆ ಎಂದರು.
ಗ್ರಾಮೀಣ ಮತದಾರರು ನೀಡಿರುವ ತೀರ್ಪನ್ನು ಒಪ್ಪಿಕೊಳ್ಳುವ ಬದಲು ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೊಳ್ಳುತ್ತಿರುವುದು ಅಚ್ಚರಿ ತಂದಿದೆ. ಹಣಬಲ, ತೋಳ್ಬಲಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.
ಜೆಡಿಎಸ್‌ಗೆ ಹಿನ್ನಡೆ ಆಗಿಲ್ಲ. ಕಳೆದ ಬಾರಿ ಪಡೆದಿದ್ದಕ್ಕಿಂತ ಹೆಚ್ಚು ಮತಗಳನ್ನು ಪಡೆಯುವಲ್ಲಿ ಪಕ್ಷ ಯಶಸ್ವಿಯಾಗಿದೆ. ಕೆಲ ಸ್ಥಾನಗಳು ಸ್ವಲ್ಪ ಅಂತರದಲ್ಲಿ ಕೈ ತಪ್ಪಿವೆ ಎಂದ ಅವರು, ಪ್ರತಿ ಜಿಪಂ ಕ್ಷೇತ್ರಕ್ಕೆ 25ರಿಂದ 30 ಲಕ್ಷ ರೂ.ನಂತೆ ಚುನಾವಣೆಗೆ 500 ಕೋಟಿ ವೆಚ್ಚ ಮಾಡಲಾಗಿದೆ. ಈ ಹಣ ಎಲ್ಲಿಂದ ಬಂತು ಎನ್ನುವುದನ್ನು ಜನರಿಗೆ ತಿಳಿಸಲಿ ಎಂದು ಆಗ್ರಹಿಸಿದರು.
ಸದ್ಯ ಸರಕಾರ ಕೃತಕ ಉಸಿರಾಟದಲ್ಲಿದೆ. ಸೂರ್ಯಗ್ರಹಣ ಬಳಿಕ ಪತನ ದಿನಗಳ ಎಣಿಕೆ ಪ್ರಾರಂಭವಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಯಾವ ರೀತಿ ಹೋರಾಡಬೇಕು ಎನ್ನುವ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.