ಬಿಜೆಪಿ ಜತೆ ಮತ್ತಷ್ಟು ಸದಸ್ಯರು 'ಕೈ' ಜೋಡಿಸ್ತಾರೆ: ರೆಡ್ಡಿ
ಬಳ್ಳಾರಿ, ಗುರುವಾರ, 6 ಜನವರಿ 2011( 16:42 IST )
ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರ ರಚಿಸಲು ಬಿಜೆಪಿ ಕೈಗೊಂಡಿರುವ ಪ್ರಯತ್ನ ಫಲಿಸಿದ್ದು, ಹಳೇಕೋಟೆ ಜಿ.ಪಂ. ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಬೆಂಬಲ ನೀಡಲು ಒಪ್ಪಿ ಪಕ್ಷಕ್ಕೆ ಬಂದಿದ್ದಾರೆ. ಒಂದೆರಡು ದಿನದಲ್ಲಿ ಇನ್ನಷ್ಟು ಕಾಂಗ್ರೆಸ್ ಸದಸ್ಯರು ಬಿಜೆಪಿಯೊಂದಿಗೆ ಕೈ ಜೋಡಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಜನಾರ್ದನ ರೆಡ್ಡಿ ವಿಶ್ವಾಸವ್ಯಕ್ತಪಡಿಸಿದ್ದಾರೆ.
ಇಲ್ಲಿಯ ಗೃಹ ಕಚೇರಿ ಕುಟೀರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಳೇಕೋಟೆ ಕ್ಷೇತ್ರದ ನಾಗರತ್ನಮ್ಮ ಪತಿ ದೊಡ್ಡ ಹನುಮಂತಪ್ಪ ಮೊದಲಿನಿಂದಲೂ ಬಿಜೆಪಿ ಕಾರ್ಯಕರ್ತರು. ಹಿಂದೆ ರಾರಾವಿ ಕ್ಷೇತ್ರದಿಂದ ಹನುಮಂತಪ್ಪ ಆಯ್ಕೆಯಾಗಿದ್ದರು. ಆದರೆ ಕಾರಣಾಂತರಗಳಿಂದ ಈ ಬಾರಿ ಟಿಕೆಟ್ ಕೈತಪ್ಪಿ ಅವರ ಪತ್ನಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಚುನಾವಣೆಯಲ್ಲಿ ಗೆದ್ದ ನಾಗರತ್ನಮ್ಮ ಈಗ ಬಿಜೆಪಿಗೆ ಬೆಂಬಲಿಸಿದ್ದಾರೆ. ಕೆಲವೇ ದಿನಗಳಲ್ಲಿ ಇನ್ನಷ್ಟು ಕಾಂಗ್ರೆಸ್ ಸದಸ್ಯರು ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 2001ರಿಂದ ಬಿಜೆಪಿ ಗೆಲ್ಲುತ್ತ ಬಂದಿದ್ದು, ಈ ಬಾರಿ ಜಿ.ಪಂ. ಕ್ಷೇತ್ರಗಳನ್ನು ಉಳಿಸಿಕೊಂಡಿದೆ. ಕಳೆದ ಬಾರಿ ಜಿ.ಪಂ.ನಲ್ಲಿ ಕಾಂಗ್ರೆಸ್ ಆಡಳಿತ ಕೊನೆಗೊಳಿಸಲು 18 ಸದಸ್ಯರು ಆಯ್ಕೆಯಾಗಿದ್ದರು. ಮಹಾನಗರ ಪಾಲಿಕೆಯಲ್ಲೂ 18 ಸದಸ್ಯರು ಆಯ್ಕೆಯಾದರು. ಹಾಗಾಗಿ 18 ಮ್ಯಾಜಿಕ್ ಸಂಖ್ಯೆ. ಈ ಸಂಖ್ಯೆ ಹಿಡಿದುಕೊಂಡೇ ಬಿಜೆಪಿ ಗೆದ್ದಿದೆ ಎಂದರು.
ಈ ಚುನಾವಣೆಯಲ್ಲಿ ರೆಡ್ಡಿಗಳಿಗೆ ಹಿನ್ನಡೆಯಾಗಿಲ್ಲ. ಅಧಿಕಾರ ರಚಿಸಲು ಬೇಕಾಗುವಷ್ಟು ಬೆಂಬಲ ಪಡೆಯಲು ಸಮರ್ಥರಿದ್ದೇವೆ. ಅಧಿಕಾರ ಪಡೆಯುತ್ತೇವೆ, ಆಡಳಿತ ನಡೆಸುತ್ತೇವೆ ಎಂದು ಹೇಳಿದರು.