ದುಃಖ, ದುಮ್ಮಾನ, ಆಕ್ರೋಶ, ಪ್ರೀತಿ ಮನುಷ್ಯನಲ್ಲಿ ಇರುವಂತೆಯೇ ಪ್ರಾಣಿಗಳಲ್ಲೂ ಇರುತ್ತದೆ ಎಂಬುದಕ್ಕೆ ಈ ಹೆಣ್ಣಾನೆಯ ಘಟನೆಯೇ ಸಾಕ್ಷಿ. ತನ್ನ ಎರಡು ಪುಟ್ಟ ಆನೆ ಮರಿಗಳು ನಿಗೂಢವಾಗಿ ಸಾವನ್ನಪ್ಪಿ ಮರಳಿಬಾರದ ಲೋಕಕ್ಕೆ ಹೋಗಿದ್ದರೂ ಸಹ ಅವುಗಳನ್ನು ಬಿಟ್ಟು ಕದಲದೆ ರೋದಿಸುತ್ತಿದ್ದ ಘಟನೆ ಹಾಸನದ ಆಲೂರು ತಾಲೂಕಿನ ಬೋಸ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆ ವಿವರ: ಎರಡು ಪುಟ್ಟ ಆನೆ ಮರಿಗಳು ಗದ್ದೆಯ ಸಮೀಪ ಸಾವನ್ನಪ್ಪಿದ್ದವು. ಇದನ್ನು ಕಂಡ ತಾಯಿ ಆನೆ ಅವುಗಳನ್ನು ಸೊಂಡಿಲಿನಿಂದ ಮೇಲಕ್ಕೆತ್ತಲು ಪ್ರಯತ್ನಿಸುತ್ತಲೇ ಇತ್ತು. ಆದರೆ ಆ ಎರಡು ಮರಿ ಆನೆಗಳು ಸಾವನ್ನಪ್ಪಿವೆ ಎಂಬುದು ಅದಕ್ಕೆ ಹೇಗೆ ತಿಳಿಯಬೇಕು. ಆದರೂ ಹೆತ್ತ ಕರುಳು, ತನ್ನ ಮರಿಗಳಿಗಾಗಿ ರೋದಿಸುತ್ತಲೇ ಇತ್ತು.
ಈ ವಿಷಯ ಬೋಸ್ಮನಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಕ್ಕೂ ತಲುಪಿತ್ತು. ಸುತ್ತಮುತ್ತಲಿನ ಗ್ರಾಮಸ್ಥರ ಜತೆ ಅರಣ್ಯಾಧಿಕಾರಿಗಳು ಜೆಸಿಬಿ ಜತೆ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದರು. ಕೋವಿ ಮೂಲಕ ಗಾಳಿಯಲ್ಲಿ ಗುಂಡು ಹಾರಿಸಿ ತಾಯಿ ಆನೆಯನ್ನು ದೂರಕ್ಕೆ ಒಡಿಸುವಲ್ಲಿ ಸ್ಥಳೀಯರು ಮತ್ತು ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದರು.
ಏತನ್ಮಧ್ಯೆ, ಜೆಸಿಬಿ ಮೂಲಕ ಮರಿ ಆನೆಗಳನ್ನು ಎತ್ತಲು ಹೋಗುತ್ತಿದ್ದಂತೆಯೇ ದೂರದಲ್ಲಿಯೇ ನಿಂತು ಗಮನಿಸುತ್ತಿದ್ದ ತಾಯಿ ಆನೆ ಘೀಳಿಡುತ್ತಾ ಓಡಿ ಬಂದು ಜೆಸಿಬಿಯನ್ನೇ ದೂರ ತಳ್ಳಿ, ರಂಪಾಟ ನಡೆಸಿತ್ತು. ಇದರಿಂದ ಕಂಗೆಟ್ಟ ಅಧಿಕಾರಿಗಳು, ಸ್ಥಳೀಯರು ಅಲ್ಲಿಂದ ಕಾಲ್ಕಿತ್ತಿದ್ದರು. ಆ ಬಳಿಕವೂ ತಾಯಿ ಆನೆ ತನ್ನ ಮರಿಗಳಿಗಾಗಿ ರೋದಿಸುತ್ತಲೇ ಇತ್ತು...
NRB
ಆನೆಗಳ ಸಾವಿಗೆ ಹೈಕೋರ್ಟ್ ಕಳವಳ: ರಾಜ್ಯದಲ್ಲಿ ಹೆಚ್ಚುತ್ತಿರುವ ಆನೆಗಳ ಸಾವಿನ ಕುರಿತು ಹೈಕೋರ್ಟ್ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ. ಆ ನಿಟ್ಟಿನಲ್ಲಿ ಆನೆಗಳ ರಕ್ಷಣೆ ಬಗ್ಗೆ ಸಮರ್ಪಕ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಖೇಹರ್ ಆದೇಶ ನೀಡಿದ್ದಾರೆ.
ಆನೆಗಳ ಸಾವಿನ ಕುರಿತು ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡಿದ್ದ ಹೈಕೋರ್ಟ್, ಆನೆಗಳನ್ನು ರಕ್ಷಿಸಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು. ಅಲ್ಲದೇ ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ನಾಲ್ಕು ವಾರಗಳ ಗಡುವು ವಿಧಿಸಿದೆ.