ರಾಜ್ಯದಲ್ಲಿ ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಪತ್ರ ಬರೆದು ಸಮರ್ಥನೆ ಮಾಡಿಕೊಂಡ ಬೆನ್ನಲ್ಲೇ, ಬಳ್ಳಾರಿ ರೆಡ್ಡಿ ಸಹೋದರರು 2004ರಿಂದಲೇ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆಂದು ಸಿಇಸಿ ಶುಕ್ರವಾರ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸುವ ಮೂಲಕ ರೆಡ್ಡಿ ಸಹೋದರರು ತೀವ್ರ ಹಿನ್ನಡೆ ಅನುಭವಿಸಿದಂತಾಗಿದೆ.
ಸುಪ್ರೀಂಕೋರ್ಟ್ ನೇಮಕ ಮಾಡಿರುವ ಸಿವಿಸಿ (ಸೆಂಟ್ರಲ್ ಎಂಪವರ್ ಕಮಿಟಿ) ಆಂಧ್ರ ಮತ್ತು ಕರ್ನಾಟಕ ಗಡಿ ಭಾಗದಲ್ಲಿನ ಗಣಿಗಾರಿಕೆಗೆ ಸಂಬಂಧಿಸಿದಂತೆ ಇಂದು ಸುಮಾರು 70 ಪುಟಗಳ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ. ಅಷ್ಟೇ ಅಲ್ಲ ಆಂಧ್ರಪ್ರದೇಶದಲ್ಲಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂನ ಮೂರು ಗಣಿ ಕಂಪನಿ ಹಾಗೂ ಅನಂತಪುರಂನ ಒಂದು ಗಣಿ ಕಂಪನಿಯ ಲೈಸೆನ್ಸ್ ರದ್ದು ಪಡಿಸುವಂತೆ ವರದಿ ಶಿಫಾರಸು ಮಾಡಿದೆ.
ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಟಪಾಲ್ ಗಣೇಶ್ ಅವರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿರುವ ಕೇಂದ್ರೀಯ ಉನ್ನತಾಧಿಕಾರ ಸಮಿತಿ ಈ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ. ಆ ನಿಟ್ಟಿನಲ್ಲಿ ರೆಡ್ಡಿ ಸಹೋದರರು ಸೇರಿದಂತೆ ಆರು ಗಣಿ ಕಂಪನಿಗಳು ಎರಡು ವಾರಗಳ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿದೆ.
ಸಿಇಸಿ ಸಲ್ಲಿಸಿದ ವರದಿಯಲ್ಲೇನಿದೆ?: *2004ರಿಂದ ರೆಡ್ಡಿ ಸಹೋದರರಿಂದ ಅಕ್ರಮ ಗಣಿಗಾರಿಕೆ
*ಓಬಳಾಪುರಂನ 3 ಹಾಗೂ ಅನಂತಪುರಂನ 1 ಗಣಿ ಕಂಪನಿ ಲೈಸೆನ್ಸ್ ರದ್ದತಿಗೆ ಶಿಫಾರಸು
*ವೈ.ಎಸ್.ಮಹಾಬಲೇಶ್ವರ ಅಂಡ್ ಸನ್ಸ್ ಮತ್ತು ಬಳ್ಳಾರಿ ಐರನ್ ಓರ್ ಗಣಿ ಕಂಪನಿಗೆ ಭಾರೀ ಮೊತ್ತದ ದಂಡ ವಿಧಿಸಲು ಸಲಹೆ.
*ಸಂರಕ್ಷಿತ ಅರಣ್ಯದಲ್ಲಿ ಅಕ್ರಮ ಗಣಿಗಾರಿಕೆ
*ಮತ್ತೆ ಗಣಿ ಗಡಿ ಗುರುತು ಸಮೀಕ್ಷೆಗೆ ಸಲಹೆ
*ಕರ್ನಾಟಕ-ಆಂಧ್ರ ಗಡಿ ಭಾಗದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು.
*ರೆಡ್ಡಿ ಸಹೋದರರ ಗಣಿ ಚಟುವಟಿಕೆಗೆ ಮತ್ತೆ ಅವಕಾಶ ಕೊಡಬಾರದು.
NRB
ಮುಖ್ಯಮಂತ್ರಿಗಳ ನಿಲುವು ಏನು?: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಭೂ ಹಗರಣ ಕುರಿತಂತೆ ಸೂಕ್ತ ಉತ್ತರ ನೀಡುವಂತೆ ಕೋರಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದರು. ಈ ಬಗ್ಗೆ ಸಾಕಷ್ಟು ವಿವಾದ ನಡೆದ ನಂತರ ಮುಖ್ಯಮಂತ್ರಿಗಳು ಎರಡು ಸಾಲಿನ ಪತ್ರ ಬರೆದು, ರಾಜ್ಯದಲ್ಲಿ ರೆಡ್ಡಿ ಸಹೋದರರು ಯಾವುದೇ ರೀತಿಯಲ್ಲೂ ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ. ತಾನೂ ಕೂಡ ಯಾವುದೇ ಭೂ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು.
ಏತನ್ಮಧ್ಯೆ, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ಮುಖ್ಯಮಂತ್ರಿಗಳು ರಾಜ್ಯಪಾಲರಿಗೆ ಪತ್ರ ಬರೆದ ಬಗ್ಗೆ ಲೋಕಾಯುಕ್ತ ಸಂತೋಷ್ ಹೆಗ್ಡೆ ಅಚ್ಚರಿ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿಯೇ ಸಾಕಷ್ಟು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ವರದಿ ನೀಡಿದ್ದರೂ ಸಹ ಮುಖ್ಯಮಂತ್ರಿಗಳು ಈ ರೀತಿ ಪತ್ರ ಬರೆದಿರುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದರು.
ಇದೀಗ ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಕುರಿತಂತೆ ಸಿಇಸಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದೆ. ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆ ಮತ್ತೊಮ್ಮೆ ಬಯಲಾಗಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ರೆಡ್ಡಿ ಸಹೋದರರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾಂಗ್ರೆಸ್, ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.
ರೆಡ್ಡಿ ಸಹೋದರರು ರಾಜೀನಾಮೆ ಕೊಡ್ತಾರಾ? ತಾವು ಯಾವುದೇ ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಮಜಾಯಿಷಿ ನೀಡುತ್ತಿದ್ದ ರೆಡ್ಡಿ ಸಹೋದರರಿಗೆ ಸಿಇಸಿ ವರದಿ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆ ನಿಟ್ಟಿನಲ್ಲಿ ರೆಡ್ಡಿ ಸಹೋದರರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಾರಾ ಎಂಬುದು ರಾಜ್ಯರಾಜಕಾರಣದಲ್ಲಿ ಕೇಳಿಬರುತ್ತಿರುವ ಪ್ರಶ್ನೆಯಾಗಿದೆ.