ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಲಿ,ತೊಂದರೆಯಿಲ್ಲ: ವಿಶ್ವನಾಥ್
ಮೈಸೂರು, ಶುಕ್ರವಾರ, 7 ಜನವರಿ 2011( 16:50 IST )
ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿರುವ ಸಂಸದ ಹಾಗೂ ಹಿರಿಯ ಕಾಂಗ್ರೆಸಿಗ ಎಚ್.ವಿಶ್ವನಾಥ್, ಈ ವಿಚಾರದಲ್ಲಿ ಹಿರಿಯ ನಾಯಕರು ದೊಡ್ಡ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿರುವುದು ನಿಜ. ಹಾಗೆಂದು ಜೆಡಿಎಸ್ ದೊಡ್ಡದಾಗಿ ಬೆಳೆದಿದ್ದೇವೆ ಅಂದು ಕೊಳ್ಳುವುದು ಬೇಡ. ಹೊಂದಾಣಿಕೆ ಬೇಕಾಗಿರುವುದು ಜೆಡಿಎಸ್‌ಗೆ ಹೊರತು ಕಾಂಗ್ರೆಸ್‌ಗೆ ಅಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯೋಚಿಸಲಿ ಎಂದು ಕುಮಾರಸ್ವಾಮಿ ಹೇಳಿಕೆ ನೀಡುತ್ತಾ ತಾವು ದೊಡ್ಡದಾಗಿ ಬೆಳೆದಿದ್ದೇವೆ ಎಂದು ಪೋಸು ನೀಡುತ್ತಿದ್ದಾರೆ. ಈಗಲೂ ಜೆಡಿಎಸ್ ಜಾತ್ಯತೀತವಾಗಿ ಉಳಿದಿಲ್ಲ. ವಿರಾಟ್ ಸ್ವರೂಪದಲ್ಲೂ ಜೆಡಿಎಸ್ ಬೆಳೆದಿಲ್ಲ. ಈಗ ಮೈತ್ರಿ ಮಾಡಿಕೊಳ್ಳುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆವರೆಗೂ ಎಳೆಯುವುದು ಜೆಡಿಎಸ್ ಲೆಕ್ಕಾಚಾರ. ಧರಂಸಿಂಗ್ ಕಾಲದಲ್ಲಿ ಮೈತ್ರಿ ಮಾಡಿಕೊಂಡು ಏನಾಯ್ತು ಎನ್ನುವುದು ಗೊತ್ತಿದೆ. ಇದೊಂದು ಸ್ಥಳೀಯ ಒಪ್ಪಂದ ಎಂದುಕೊಳ್ಳಬೇಕೇ ಹೊರತು ಪಕ್ಷದ ನಾಯಕರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ನನ್ನ ವೈಯಕ್ತಿಕ ನೆಲೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಬೇಡ ಎಂದು ಹೇಳುತ್ತಿದ್ದೇನೆ. ಈ ನಿಟ್ಟಿನಲ್ಲಿ ಇನ್ನೂ ಯಾವುದೇ ತೀರ್ಮಾನ ಪಕ್ಷದಿಂದ ಆಗಿಲ್ಲ. ಮೈತ್ರಿ ಮಾಡಿಕೊಳ್ಳುವ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಂಡರೆ ಅದಕ್ಕೆ ನಾನು ಬದ್ಧ ಎಂದು ತಿಳಿಸಿದರು.