ಅಕ್ರಮ ಗಣಿಗಾರಿಕೆ ನಿಲ್ಲಿಸಲು ಗಣಿ ರಾಷ್ಟ್ರೀಕರಣವೇ ಸೂಕ್ತ ಎಂದು ಸಿಪಿಎಂನ ಪಾಲಿಟ್ ಬ್ಯೂರೋ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯ ಸೀತಾರಾಮ ಯೆಚೂರಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅಖಿಲ ಭಾರತ ವಕೀಲರ ಸಂಘದ ಬೆಂಗಳೂರು ಸಮಿತಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಜಾಪ್ರಭುತ್ವ ಹಾಗೂ ಭ್ರಷ್ಟಾಚಾರದ ಸವಾಲುಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ನಿಲ್ಲಬೇಕಿದ್ದರೆ ರಾಷ್ಟ್ರದ ಎಲ್ಲ ಗಣಿಗಳನ್ನು ರಾಷ್ಟ್ರೀಕರಣ ಮಾಡಬೇಕು ಎಂದರು.
ಅಮೆರಿಕವಾಗಲಿ, ಚೀನಾ ದೇಶವಾಗಲಿ ತಮ್ಮ ದೇಶದ ನೈಸರ್ಗಿಕ ಸಂಪತ್ತನ್ನು ಇದುವರೆಗೂ ಬಳಕೆ ಮಾಡದೆ ಕಷ್ಟ ಕಾಲದಲ್ಲಿ ಬೇಕಾಗುತ್ತದೆ ಎಂದು ಕಾಯ್ದಿರಿಸಿಕೊಂಡಿದೆ. ಆದರೆ ಭಾರತದಲ್ಲಿ ಮಾತ್ರ ನೈಸರ್ಗಿಕ ಸಂಪತ್ತುಗಳ ಲೂಟಿ ಅವ್ಯಾಹತವಾಗಿ ನಡೆದಿದೆ. ಇದಕ್ಕೆ ತಡೆ ಹಾಕದಿದಿದ್ದರೆ ಅಪಾಯ ಕಾದಿದೆ ಎಂದು ಹೇಳಿದರು.
ಗಣಿಗಾರಿಕೆಯಿಂದ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಜತೆಗೂ ಕೃಷಿಗೂ ಭಾರೀ ಹೊಡೆತ ಬೀಳುತ್ತಿದೆ. ಹಾಗಾಗಿ ಕಬ್ಬಿಣವಿರಲಿ, ಮ್ಯಾಂಗನೀಸ್ ಇರಲಿ, ಯಾವುದೇ ರೀತಿಯ ಗಣಿಗಾರಿಕೆ ಬೇಡ. ಎಲ್ಲ ಗಣಿಗಳನ್ನು ರಾಷ್ಟ್ರೀಕರಣಗೊಳಿಸಲು ಕೇಂದ್ರ ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಭ್ರಷ್ಟಾಚಾರ ನಿಯಂತ್ರಣ ಮಾಡದಿದ್ದರೆ ದೇಶದ ಭವಿಷ್ಯಕ್ಕೆ ಅಪಾಯವಿದೆ. ಭ್ರಷ್ಟಾಚಾರಕ್ಕೆ ಕಾರಣವಾಗಿರವ ಅಂಶವನ್ನು ಗಮನಿಸಿ ಹೊಸ ಕಾಯ್ದೆ ನಿಯಂತ್ರಣಗಳನ್ನು ಹೇರಲು 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಪಟ್ಟು ಹಿಡಿಯಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲೇ ಭ್ರಷ್ಟಾಚಾರ ನಿಯಂತ್ರಣಕ್ಕೆ ಹೊಸ ಕಾಯ್ದೆ ನಿಯಂತ್ರಣಗಳನ್ನು ಜಾರಿಗೊಳಿಸದಿದ್ದರೆ ಭವಿಷ್ಯದಲ್ಲಿ ಭಾರತ ಸದೃಢ ರಾಷ್ಟ್ರವಾಗಲು ಆತಂಕಗಳು ಎದುರಾಗುವುದು ನಿಶ್ಚಿತ ಎಂದರು.