ವಿಧಾನಸಭೆ ಚುನಾವಣೆ ನಂತರ ಆಪರೇಶನ್ ಕಮಲದ ಮೂಲಕ ಪ್ರತಿಪಕ್ಷಗಳ ನಿದ್ದೆಗೆಡಿಸಿದ್ದ ಗಣಿ ರೆಡ್ಡಿಗಳು ಅದೇ ಸಂಪ್ರದಾಯವನ್ನು ಜಿಪಂ. ಮತ್ತು ತಾಲೂಕು ಪಂಚಾಯಿತಿಗಳಲ್ಲಿಯೂ ಮುಂದುವರಿಸಿದ್ದರು. ಆದರೆ ಇದೀಗ ಅದೇ ಆಪರೇಶನ್ 'ಕೈ' ಭಯದಿಂದ ಬೆಚ್ಚಿಬಿದ್ದಿದ್ದಾರೆ.
36 ಸದಸ್ಯ ಬಲದ ಬಳ್ಳಾರಿ ಜಿಲ್ಲಾ ಪಂಚಾಯಿತಿಯನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಸದಸ್ಯೆ ನಾಗರತ್ನಮ್ಮ ಅವರನ್ನು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಶ್ರೀರಾಮುಲು ಸೆಳೆದುಕೊಂಡಿದ್ದರು. ಈಗ ಬಿಜೆಪಿ ಆಪರೇಷನ್ ಹಸ್ತದ ಭೀತಿಗೆ ಒಳಗಾಗಿದೆ.
17 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಬಹುಮತಕ್ಕೆ ಬರಲು ಬಿಜೆಪಿಯ 5 ಮಂದಿ ಸದಸ್ಯರನ್ನು ಆಪರೇಶನ್ ಮೂಲಕ ತನ್ನತ್ತ ಸೆಳೆದುಕೊಳ್ಳಲು ಮುಂದಾಗಿದೆ ಎಂಬ ಮಾಹಿತಿ ದೊರೆಯುತ್ತಿದ್ದಂತೆ ರೆಡ್ಡಿಗಳು ಕಂಗಾಲಾಗಿದ್ದಾರೆ. ಪಕ್ಷಾಂತರಗೊಂಡ ಕಾಂಗ್ರೆಸ್ ಸದಸ್ಯೆ ಸೇರಿದಂತೆ ತನ್ನ ಎಲ್ಲಾ 19 ಸದಸ್ಯರನ್ನು ತೋರಣಗಲ್‌ನ ಜಿಂದಾಲ್ ಸಮೀಪದ ಹೋಟೆಲ್‌ಗೆ ಕರೆದೊಯ್ದು ಇರಿಸಲಾಗಿದೆ ಎಂದು ಮೂಲವೊಂದು ತಿಳಿಸಿದೆ.
ಸ್ವತಃ ಬಿಜೆಪಿಯ ವಿಧಾನಪರಿಷತ್ ಸದಸ್ಯರೊಬ್ಬರು ಹೋಟೆಲ್‌ನಲ್ಲಿರುವ ಜಿ.ಪಂ. ಸದಸ್ಯರ ಮೇಲೆ ನಿಗಾ ಇಟ್ಟಿದ್ದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆವರೆಗೂ ನೂತನ ಸದಸ್ಯರಿಗೆ ಹೋಟೆಲ್‌ನಲ್ಲಿ ವಾಸದ ವ್ಯವಸ್ಥೆ ಮಾಡಲಾಗಿದೆ.
ರಾಯಚೂರು ಜಿಲ್ಲಾ ಪಂಚಾಯಿತಿಯಲ್ಲೂ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದ ಬಿಜೆಪಿಗೆ ಸಡ್ಡು ಹೊಡೆಯಲು ಬಳ್ಳಾರಿಯಲ್ಲೇ ಕಾಂಗ್ರೆಸ್ ಮುಖಂಡರು ಆಪರೇಷನ್ ಕೈಗೆ ಮುಂದಾಗಿದ್ದಾರೆ ಎನ್ನಲಾಗಿದೆ.
NRB
ಯಾವ ಆಪರೇಷನ್ ಗೊತ್ತಿಲ್ಲಾರೀ....: ಕರುಣಾಕರ ರೆಡ್ಡಿ ಪ್ರಜಾಪ್ರಭುತ್ವದಲ್ಲಿ ಯಾರು ಏನು ಮಾಡಬೇಕು, ಎಲ್ಲಿಗೆ ಹೋಗಬೇಕು, ಹೋಗಬಾರದು ಎಂಬುದಕ್ಕೆ ಸ್ವಾತಂತ್ರ್ಯ ಇದೆ. ಅದು ಅವರವರ ಇಷ್ಟ ಯಾರು ಎಲ್ಲಿಗೂ ಬರಬಹುದು, ಹೋಗಬಹುದು ಎಂದು ಕಂದಾಯ ಸಚಿವ ಕರುಣಾಕರ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಇಲ್ಲಾರಿ ನನಗೆ ಯಾವ ಆಪರೇಶನ್ ಗೊತ್ತಿಲ್ಲ ಎಂದು ಬಳ್ಳಾರಿಯಲ್ಲಿನ ಆಪರೇಷನ್ ಕೈ ಕುರಿತ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿ ಜಾರಿಕೊಂಡರು.
ಬಳ್ಳಾರಿಯಲ್ಲಿ ಬಿಜೆಪಿ ಆಪರೇಶನ್ ಕಮಲ ಮಾಡಿದ್ದು, ಈಗ ಆಪರೇಷನ್ ಹಸ್ತಕ್ಕೆ ಹೆದರಿ ಬಿಜೆಪಿಯ ಜಿ.ಪಂ. ಸದಸ್ಯರನ್ನು ಖಾಸಗಿ ಹೋಟೆಲ್‌ವೊಂದರಲ್ಲಿ ವಾಸ್ತವ್ಯ ಹೂಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಸುದ್ದಿ ಇದೆಯಲ್ಲ ಎಂಬ ಪ್ರಶ್ನೆಗೆ, ನನಗೇನೂ ಗೊತ್ತಿಲ್ಲ. ನಾವು ಯಾವುದೇ ಆಪರೇಷನ್ ಕಮಲ ನಡೆಸುವುದಿಲ್ಲ. ಅಲ್ಲದೇ ಯಾವ ಆಪರೇಷನ್ ಬಗ್ಗೆಯೂ ನನಗೂ ಗೊತ್ತಿಲ್ಲ ಎಂದರು.