ಜನಜಾಗೃತಿ ವೇದಿಕೆ ಒಕ್ಕೂಟದ ವತಿಯಿಂದ ಶನಿವಾರ ಉಡುಪಿಯಲ್ಲಿ ಆಯೋಜಿಸಲಾಗಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದ 'ವಿದ್ಯಾರ್ಥಿ ಸಂಚಲನ' ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಭ್ರಷ್ಟಾಚಾರ ಮುಕ್ತ ಸಮಾಜ ಯುವಜನರಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭ್ರಷ್ಟಾಚಾರ ಎಂಬುದು ಹಕ್ಕು ಎನ್ನುವಂತಾಗಿದೆ. ಆದರೆ ಕಾನೂನು ಚೌಕಟ್ಟನ್ನು ಪಾಲಿಸುವ ಮನೋಸ್ಥಿತಿ ಬೆಳೆಸುವ ಮೂಲಕ ಭ್ರಷ್ಟಾಚಾರ ಮುಕ್ತ ಸಮಾಜ ಕಂಡುಕೊಳ್ಳಬಹುದು. ಹೀಗಾಗಿ ಯುವ ಜನತೆ ಭ್ರಷ್ಟಾಚಾರ ಮುಕ್ತ ಸಮಾಜ ಕಟ್ಟಲು ಮುಂದಾಗಬೇಕು ಎಂದವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
175ಕ್ಕೂ ಹೆಚ್ಚು ಮಕ್ಕಳ ಪ್ರಶ್ನೆಗಳಿಗೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಉತ್ತರ ನೀಡಿದರು. ಈ ಸಂದರ್ಭದಲ್ಲಿ ಹೇಳಿಕೆ ನೀಡಿದ ಅವರು ಯುವಜನತೆಗೆ ಮಾತ್ರ ಇದನ್ನು ಸಮಾಜದಿಂದ ಸಂಪೂರ್ಣವಾಗಿ ಹತ್ತಿಕ್ಕಲು ಸಾಧ್ಯ ಎಂದರು.
ಪರೀಕ್ಷೆಯಲ್ಲಿ ನಕಲು ಮಾಡವುದು ಭ್ರಷ್ಟಾಚಾರದ ಮೆಟ್ಟಿಲು. ಹೀಗಾಗಿ ಮಕ್ಕಳಲ್ಲಿ ಸಹಜ ಗುಣ ಉತ್ತೇಜಿಸುವ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಮನೋವಿಜ್ಞಾನಿ ಡಾ. ಅ. ಶ್ರೀಧರ್ ತಿಳಿಸಿದರು.