ಪ್ರಜಾತಂತ್ರದ ಬಗ್ಗೆ ನಂಬಿಕೆ ಇದ್ದರೆ ಕೂಡಲೇ ರೆಡ್ಡಿ ಬ್ರದರ್ಸ್ ರಾಜೀನಾಮೆ ಪಡೆಯಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಮಾಡಿದ್ದಾರೆ.
ಶುಕ್ರವಾರ ಸುಪ್ರೀಂಕೋರ್ಟ್‌ಗೆ ಸಿಇಸಿ ಸಲ್ಲಿಸಿದ್ದ ವರದಿಯಲ್ಲಿ ರೆಡ್ಡಿ ಸಹೋದರರರು ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಆದರೆ ರಾಜ್ಯದಲ್ಲಿ ಯಾವುದೇ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ಬಾಯಿ ಕೊಚ್ಚುತ್ತಿದ್ದ ಸಿಎಂ ಇದೀಗ ಸಪ್ಪೆಯಾಗಿದ್ದಾರೆ. ನೈತಿಕತೆ ಎಂಬುದು ಇದ್ದರೆ ಬಳ್ಳಾರಿ ಸಚಿವರ ರಾಜೀನಾಮೆ ವಾಪಾಸ್ ಪಡೆಯಬೇಕು ಎಂದು ಸಿದ್ದು ಆಗ್ರಹಿಸಿದ್ದಾರೆ.
ಈ ಹಿಂದೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಬರೆದ ಪತ್ರದಲ್ಲಿ ರಾಜ್ಯದಲ್ಲಿ ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮರ್ಥನೆ ಮಾಡಿಕೊಂಡಿದ್ದರು. ಆದರೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಸಿಇಸಿ ವರದಿಯಲ್ಲಿ ಸ್ಪಷ್ಟಗೊಂಡಿದೆ. ಇದರಿಂದಾಗಿ ರಾಜ್ಯ ಸರಕಾರ ಮತ್ತಷ್ಟು ಮುಜುಗರ ಅನುಭವಿಸುವಂತಾಗಿದೆ.
ಪ್ರತಿಕ್ರಿಯೆ ನೀಡುವುದಿಲ್ಲ... ಮತ್ತೊಂದೆಡೆ ದೆಹಲಿಯಲ್ಲಿ ಅಕ್ರಮ ಗಣಿಗಾರಿಕೆ ಬೆಳವಣಿಗೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ರಾಜ್ಯಪಾಲ ಹಂಸರಾಜ ಭಾರಧ್ವಾಜ್ ನಿರಾಕರಿಸಿದ್ದಾರೆ. ಸಿಇಸಿ ವರದಿ ಬಗ್ಗೆ ಈಗಲೇ ಪ್ರತಿಕ್ರಿಯೆ ನೀಡುವುದಿಲ್ಲ; ಬೆಂಗಳೂರಿಗೆ ಬಂದ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ ಎಂದವರು ತಿಳಿಸಿದ್ದಾರೆ.