ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಧಾನಮಂಡಲ ಕಲಾಪ;ಸಿದ್ದು, ಸುರೇಶ್ ಕುಮಾರ್ ಜಟಾಪಟಿ (Suresh kumar | BJP | Siddarmaiah | Yeddyurappa | JDS)
Bookmark and Share Feedback Print
 
ಭೂಹಗರಣ, ಸ್ವಜನ ಪಕ್ಷಪಾತ, ಡಿ ನೋಟಿಫಿಕೇಷನ್ ಕರ್ಮಕಾಂಡ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಆರೋಪ-ಪ್ರತ್ಯಾರೋಪರ ತಾರಕ್ಕೇರಿ ಸದನದಲ್ಲಿ ಕೋಲಾಹಲ ನಡೆದು ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

ಸುಮಾರು ಒಂದು ಮುಕ್ಕಾಲು ಗಂಟೆಗಳ ಕಾಲ ಸದನದಲ್ಲಿ ಚರ್ಚೆ ನಡೆಯಿತು. ಸರಕಾರದ ವಿರುದ್ಧ ನಿಲುವಳಿ ಸೂಚನೆ ಪ್ರಸ್ತಾಪವನ್ನು ತಿರಸ್ಕಾರ ಮಾಡಿದ ಸ್ಪೀಕರ್ ಬೋಪಯ್ಯ ಕ್ರಮವನ್ನು ವಿರೋಧಿಸಿ ಪ್ರತಿಪಕ್ಷದ ಸದಸ್ಯರು ಧರಣಿ ನಡೆಸಿದರು.

ಇಂದು ಕಲಾಪ ಆರಂಭವಾಗುತ್ತಿದ್ದಂತೆಯೇ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಸರಕಾರದ ಭೂ ಹಗರಣ ಮತ್ತು ಭ್ರಷ್ಟಾಚಾರದ ಬಗ್ಗೆ ನಿಲುವಳಿ ಸೂಚನೆ ಮೂಲಕ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಸಭಾಧ್ಯಕ್ಷರ ಮನವೊಲಿಸಲು ಪ್ರಯತ್ನಿಸಿದರು.

ಆದರೆ ಈ ಹಂತದಲ್ಲಿ ಸಚಿವ ಸುರೇಶ್ ಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಜಟಾಪಟಿ ನಡೆಯಿತು. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಸಾಥ್ ಕೊಟ್ಟರು. ಆಡಳಿತ ಪಕ್ಷದಲ್ಲಿ ಸುರೇಶ್ ಕುಮಾರ್ ಅವರಿಗೆ ಈಶ್ವರಪ್ಪ, ಬಸವರಾಜ್ ಬೊಮ್ಮಾಯಿ, ಬಚ್ಚೇಗೌಡ ಬೆಂಬಲಕ್ಕೆ ನಿಂತರು.

ಕುತೂಹಲವೆಂದರೆ ಬಿಸಿ, ಬಿಸಿ ಚರ್ಚೆಯುದ್ದಕ್ಕೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ನಿಲುವಳಿ ಸೂಚನೆ ನೋಟಿಸ್‌ನಲ್ಲಿ ಹೇಳಲಾಗಿದೆ. ಇದು ನಿಲುವಳಿ ಸೂಚನೆ ವ್ಯಾಪ್ತಿಗೆ ಬರುವುದಿಲ್ಲ. ಇದನ್ನು ತಳ್ಳಿಹಾಕಬೇಕೆಂದು ಸುರೇಶ್ ಕುಮಾರ್ ಅವರು ಸ್ಪೀಕರ್ ಅವರಲ್ಲಿ ಮನವಿ ಮಾಡಿಕೊಂಡರು.

ನಂತರ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಮಾತನಾಡಿ, ಅಧಿವೇಶನದಲ್ಲಿ ಚರ್ಚೆ ಮಾಡಿ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಇಲ್ಲಿ ನೋಡಿದರೆ ಚರ್ಚೆಗೆ ಅವಕಾಶ ಸಿಗುತ್ತಿಲ್ಲ. ಹೀಗಾದರೆ ಅಧಿವೇಶನ ಕರೆದಿರುವುದು ಏಕೆ? ಚರ್ಚೆ ಮಾಡುವುದು ಬೇಡ ಎಂದರೆ ನಾವು ಸದನಕ್ಕೆ ಬರುವುದಿಲ್ಲ. ಈಗಲೇ ಎದ್ದು ಮನೆಗೆ ಹೋಗುತ್ತೇವೆ. ರಾಜ್ಯ ಲೂಟಿಯಾಗುತ್ತಿದೆ, ಭ್ರಷ್ಟಾಚಾರ ಮೇರೆ ಮೀರಿದೆ ಎಂದು ವಾಗ್ದಾಳಿ ನಡೆಸಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಮುಖಂಡರ ಕೋಲಾಹಲದಿಂದಾಗಿ ಸ್ಪೀಕರ್ ಅವರು ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

ಮಧ್ಯಾಹ್ನ 3ಗಂಟೆಯ ನಂತರವೂ ಕಲಾಪ ಆರಂಭವಾದಗಲೂ ವಿಪಕ್ಷಗಳು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ, ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದವು. ಸ್ಪೀಕರ್ ಅವರು ಪದೇ, ಪದೇ ಮನವಿ ಮಾಡಿಕೊಂಡರೂ ಆಡಳಿತಾರೂಢ ಮತ್ತು ವಿಪಕ್ಷ ಮುಖಂಡರು ಗದ್ದಲ ಮುಂದುವರಿಸಿದ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆಗೆ ಮುಂದೂಡಿದರು.
ಸಂಬಂಧಿತ ಮಾಹಿತಿ ಹುಡುಕಿ