ಶ್ರೀರಾಮ ಜನ್ಮಸ್ಥಳ ಅಯೋಧ್ಯೆಯಲ್ಲೇ ರಾಮ ಮಂದಿರ ನಿರ್ಮಿಸಲು ದೇಶದ ಹಿಂದೂಗಳೆಲ್ಲ ಒಂದಾಗಬೇಕು ಎಂದು ಆರೆಸ್ಸೆಸ್ ಹಿರಿಯ ಪ್ರಚಾರಕ ಸು.ರಾಮಣ್ಣ ಕರೆ ನೀಡಿದ್ದಾರೆ.
ನಗರದ ಬಸವೇಶ್ವರ ಕಾಲೇಜ್ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದರು. ರಾಮಮಂದಿರ ನಿರ್ಮಾಣ ಕುರಿತು ನ್ಯಾಯಾಲಯ ತೀರ್ಪು ಹೊರಬಂದಿದ್ದು, ಸಂಸತ್ತಿನಲ್ಲಿ ಶಾಸನ ರಚಿಸಿ ಜಾಗ ಹಸ್ತಾಂತರಿಸುವ ಮೂಲಕ ಕೇಂದ್ರ ಸರಕಾರ ಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕಿದೆ ಎಂದರು.
ರಾಮಮಂದಿರವನ್ನು ಅಲ್ಲಿಯೇ ಕಟ್ಟುತ್ತೇವೆ ಎನ್ನುವುದನ್ನು ಸಾರಲು ಹಿಂದೂಗಳೆಲ್ಲ ಜಾಗೃತರಾಗಬೇಕಿದೆ. ಆ ಹಿನ್ನೆಲೆಯಲ್ಲೇ ಹನುಮಾನ್ ಶಕ್ತಿ ಜಾಗರಣ ಸಮಿತಿ ದೇಶದಾದ್ಯಂತ ಹಿಂದೂಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಹಿಂದೂಗಳು ಜಾಗೃತರಾಗುತ್ತಿದ್ದಾರೆ ಎಂದು ಭಾಸವಾಗತೊಡಗಿದೆ. ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸ ಎಲ್ಲರಿಂದ ನಡೆಯಬೇಕು ಎಂದು ಹೇಳಿದರು.
ನೆರೆ ಪಾಕಿಸ್ತಾನದ ಕುಮ್ಮಕ್ಕಿನಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚುತ್ತಲೇ ಇದೆ. ಆರಂಭದಲ್ಲಿ ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿದ್ದ ಭಯೋತ್ಪಾದನೆ ಈಗ ಜಮ್ಮು ಮತ್ತು ಲಡಾಖ್ ಪ್ರದೇಶಗಳಿಗೂ ಹಬ್ಬಿದೆ. ಅಲ್ಲಿಯ ಕೆಲ ಜನರ ಪ್ರತ್ಯೇಕತೆ ಕೂಗಿಗೆ ಕೇಂದ್ರ ಸರಕಾರ ದಿಟ್ಟ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಸತ್ಯವನ್ನು ಎತ್ತಿ ತೋರಿಸಬೇಕಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಮುಸ್ಲಿಂ ಮತ ಬ್ಯಾಂಕ್ ಮೇಲಿನ ಆಸೆಗಾಗಿ ಅವರನ್ನು ತುಷ್ಟೀಕರಣಗೊಳಿಸಲು ಅನೇಕ ರಾಜಕಾರಣಿಗಳು ಅನಗತ್ಯವಾಗಿ ಹಿಂದೂ ಭಯೋತ್ಪಾದನೆ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ದೇಶಭಕ್ತ ಸಂಘಟನೆಗಳನ್ನು ಭಯೋತ್ಪಾದನೆಯಂತಹ ದೇಶದ್ರೋಹಿ ಸಂಘಟನೆಗಳ ಜತೆಗೆ ಹೋಲಿಕೆ ಮಾಡುತ್ತಿರುವ ಹುನ್ನಾರಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ.ಅದಕ್ಕಾಗಿ ದೇಶದ ಹಿಂದೂಗಳೆಲ್ಲ ಒಂದಾಗಿ ಒಗ್ಗಟ್ಟಿನಿಂದ ದೇಶದಲ್ಲಿ ಉಂಟಾಗಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದರು.