ಮುಖ್ಯಮಂತ್ರಿಯಾದ ದಿನದಿಂದಲೂ ನಾನು ತೊಂದರೆ ಅನುಭವಿಸುತ್ತಿದ್ದೇನೆ. ಪ್ರವಾಹದ ವಿರುದ್ಧ ಈಜುವುದನ್ನು ಹಿರಿಯರು ಕಲಿಸಿಕೊಟ್ಟಿದ್ದಾರೆ. ಹಾಗಾಗಿ ಯಾವುದೇ ಪರಿಸ್ಥಿತಿಗೂ ಹೆದರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾವುಕರಾಗಿ ತಮ್ಮ ಅಳಲನ್ನು ಹೊರಹಾಕಿದ್ದಾರೆ.
ನಗರದ ಶಿಕ್ಷಕರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿ ಜಿಲ್ಲೆಯ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಹಾಗೂ ಪ್ರೋತ್ಸಾಹ ಧನ ವಿತರಿಸಿ ಅವರು ಮಾತನಾಡಿದರು.
ಪ್ರಸಕ್ತ ರಾಜ್ಯರಾಜಕಾರಣದಲ್ಲಿ ಸಾಕಷ್ಟು ಪಾಠಗಳನ್ನು ಕಲಿತಿದ್ದೇನೆ. ಆ ನಿಟ್ಟಿನಲ್ಲಿ ಪ್ರವಾಹದ ವಿರುದ್ಧ ಈಜುವ ಶಕ್ತಿ ಬಂದಿದೆ. ಸತ್ತ ಮೀನಿಗೆ ಪ್ರವಾಹದ ವಿರುದ್ಧ ಈಜಲು ಸಾಧ್ಯವಿಲ್ಲ ಎಂದು ಅವರು ಮಾರ್ಮಿಕವಾಗಿ ಹೇಳಿದರು.
ವಿದ್ಯಾರ್ಥಿಗಳೂ ಸಹ ಪ್ರವಾಹದ ವಿರುದ್ಧ ಈಜುವುದನ್ನು ಕಲಿಯಬೇಕು ಎಂದ ಅವರು, ನಾನು ಉತ್ತಮ, ನಾನು ಸಾಧಿಸಿಯೇ ತೀರುತ್ತೇನೆ, ದೇವರು ಸದಾ ನನ್ನ ಜತೆಗಿದ್ದರೆ ನಾನು ವಿಜೇತ, ಇದು ನನ್ನ ದಿನ ಎಂಬ ಆತ್ಮವಿಶ್ವಾಸದ ನುಡಿಗಳನ್ನು ಪ್ರತಿದಿನ ಹೇಳಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಗುರುಕುಲ ಪದ್ಧತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ನಾಡಿನ ಅಭಿವೃದ್ಧಿ ಮತ್ತು ಸ್ವಾವಲಂಬನೆಯನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು. ಸ್ವಾರ್ಥ ಬಿಟ್ಟು ಸಮಾಜಕ್ಕಾಗಿ ಬದುಕುವಂತಹ ಪ್ರೇರಣೆಯನ್ನು ನೀಡಬೇಕೆಂದು ಹೇಳಿದರು. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸರ್ವರಿಗೂ ಸಮಬಾಳು, ಸಮಪಾಲು ಎಂಬ ಘೋಷ ವಾಕ್ಯವನ್ನು ಅಕ್ಷರಶಃ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.
ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಧಾನಮಂತ್ರಿಯಿಂದ ಹಿಡಿದು ಪ್ರತಿಪಕ್ಷಗಳ ಎಲ್ಲಾ ನಾಯಕರಿಗೂ ಮಾಹಿತಿ ರವಾನಿಸಿದ್ದೇನೆ. ಮುಂದಿನ ಎರಡೂವರೆ ವರ್ಷಗಳಲ್ಲಿ ವಿದ್ಯುತ್‌ನಲ್ಲಿ ರಾಜ್ಯ ಸ್ವಾವಲಂಬನೆ ಸಾಧಿಸುತ್ತದೆ ಎಂದರು. ಕೃಷ್ಣಾ ನ್ಯಾಯಾಧೀಕರಣ ತೀರ್ಪಿನಿಂದ 15ರಿಂದ 16 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಭೂಮಿ ನೀರಾವರಿಯಾಗಲಿದೆ ಎಂದು ತಿಳಿಸಿದರು.